ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಉಶನಸ-ಶುಕ್ರಾಚಾರ್ಯ, ಕಾವ್ಯ-ಭಾರ್ಗವ ಇವರೆಲ್ಲರೂ ಒಂದೇ ಇದ್ದಾರೆ. “ಭಾರ್ಗವ' ಎಂಬುದು ಕುಲದ ಹೆಸರೆಂದು ರಾಮಾಯಣದಲ್ಲಿ ಬಂದಿದೆ. ಈತನೇ ಶುಕ್ರಾಚಾರ್ಯ, ಶುಕ್ರಾಚಾರ್ಯನು ದಾನವರ ಪುರೋಹಿತನಾಗಿದ್ದನು. ಭ್ರಗುವಿನಿಂದ ಈತನಿಗೆ ಸಂಜೀವಿನೀವಿದ್ಯೆ ಪ್ರಾಪ್ತವಾಗಿತ್ತು. ದೇವದಾನವರ ಕಾಳಗದಲ್ಲಿ ಇದರ ಲಾಭವನ್ನು ದಾನವರು ಪಡೆದುಕೊಂಡರು. ಬೃಹಸ್ಪತಿಯು ದೇವತೆಗಳ ಗುರುವಾಗಿದ್ದನು. ಈತನ ಮಗನೆಂದರೆ ಕಚ. ಕಚನು ಸಂಜೀವಿನೀ ವಿದ್ಯೆಯನ್ನು ಪಡೆದುಕೊಳ್ಳಲು ಶುಕ್ರಾಚಾರನ ಬಳಿ ಶಿಷ್ಯನಾಗಿ ಹೋದನು. ಕಚನಿಗೆ ವಿದ್ಯೆ ಲಭಿಸಿತು; ಆದರೆ, ದೇವಯಾನಿಯ ಶಾಪದಿಂದ ಅದು ಫಲಕಾರಿಯಾಗಲಿಲ್ಲ. ಬಲಿರಾಜನು ವಾಮನನಿಗೆ ಮೂರು ಪಾದಗಳಷ್ಟು ಭೂಮಿಯನ್ನು ದಾನ ಕೊಡುವಾಗ ಶುಕ್ರಾಚಾರ್ಯನು ಅದಕ್ಕೆ ಅಡ್ಡಿ ಮಾಡಲೆಂದು ಕೈಮೇಲೆ ನೀರನ್ನು ಧಾರೆಯಾಗಿಸುವ ಪಾತ್ರೆಯ ಸೊಂಡಿಲಲ್ಲಿ ಆತಂಕವಾಗಿ ಕುಳಿತನು. ತನ್ನ ಕನ್ಯಯಾದ ದೇವಯಾನಿಯೊಡನೆ ಆಕೆಯ ಗಂಡನಾದ ಯಯಾತಿಯು ಸರಿಯಾಗಿ ವರ್ತಿಸುವದಿಲ್ಲವೆಂದು ಯಯಾತಿಗೆ ಅಕಾಲದಲ್ಲಿ ವೃದ್ದಾಪ್ಯದ ಶಾಪವನ್ನು ಶುಕ್ರಾಚಾರ್ಯನು ಕೊಟ್ಟನು. ಈ ಶುಕ್ರಾಚಾರ್ಯನು ದಂಡರಾಜನ ಪುರೋಹಿತನಾಗಿದ್ದಾಗ ಆತನ ಕನ್ಯಯಾದ ಅರಜೆಯನ್ನು ದಂಡರಾಜನು ಬಲಾತ್ಕಾರಮಾಡಿ ಉಪಭೋಗಿಸಿದನು. ಆಗ ಶುಕ್ರಾಚಾರ್ಯನು ದಂಡರಾಜನನ್ನು ಮತ್ತು ಆತನ ರಾಜ್ಯವಾದ ದಂಡಕಾ ರಣ್ಯವನ್ನು ಶಪಿಸಿದನು. ಅಲ್ಲಿಯ ಆಶ್ರಮನಿವಾಸಿಗಳಿಗೆ ಅಲ್ಲಿಂದ ಹೊರಬೀಳಲು ಹೇಳಿ, ಒಂದು ವಾರದಲ್ಲಿ ಇಂದ್ರನಿಂದ ಧೂಲಿಯ ಮಳೆಗರೆಯಿಸಿ, ದಂಡಕಾರಣ್ಯ ವನ್ನು ಹಾಳುಗೆಡವಿ, ಈ ರಾಜನ ವಧೆಯನ್ನು ಮಾಡಿಸಿದನು. ಶುಕ್ರಾಚಾರ್ಯನು ಕೆಲವು ಸೂತ್ರಗಳ ದ್ರಷ್ಟಾರನಾಗಿದ್ದಾನೆ. ಸಾವಿರಾರು ವರ್ಷಗಳವರೆಗೆ ತಪವನ್ನಾಚರಿಸಿ ಇವನು ಶಂಕರನನ್ನು ಪ್ರಸನ್ನಗೊಳಿಸಿಕೊಂಡು, ಪ್ರಜೇಶ. ಧನೇಶತ್ವ ಮತ್ತು ಅವಧೂತ್ವವನ್ನು ಬೇಡಿಕೊಂಡನು. ಈತನು ಧರ್ಮಶಾಸ್ತ್ರಕಾರ. ಉಶನಸ ಧರ್ಮಶಾಸ್ತ್ರ ಔಶನಸ ಸ್ಥತಿ ಮೊದಲಾದ ಗ್ರಂಥಗಳನ್ನು ಬರೆದಿದ್ದಾನೆ. ಶುಕ್ರನೀತಿ ಎಂಬ ರಾಜಕಾರಣ ವಿಷಯದ ಗ್ರಂಥವು ಪ್ರಸಿದ್ದವಿದೆ. ಶತಪರ್ವಾ, ಆಂಗಿ, ಉರ್ಜಸ್ವತಿ, ಜಯಂತಿ, ಗೌ ಎಂಬ ಮತ್ತು ಇನ್ನೂ ಅನೇಕ ಪತ್ನಿಯರು ಆತನಿಗಿದ್ದರು. ದೇವಯಾನಿಯು ಜಯಂತಿ ಎಂಬಾಕೆಯ ಮಗಳು. ಶುಕ್ರಾಚಾರ್ಯನಿಗೆ ಇನ್ನೂ ಅನೇಕ ಮಕ್ಕಳಿದ್ದರು.