ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೭೭


೧೩೮. ಶುನಃಶೇಪ

ಈತನು ಭೃಗುಕುಲೋತ್ಪನ್ನನಾದ ಋಚೀಕನ ನಡುವಿನ ಮಗ. ಹರಿಶ್ಚಂದ್ರನಿಗೆ
ಗಂಡುಸಂತಾನವಿರಲಿಲ್ಲ. 'ನನಗೆ ಪುತ್ರನು ಹುಟ್ಟಿದರೆ ನಿನಗೆ ಬಲಿಯನ್ನರ್ಪಿಸುವೆ'
ಎಂದು ವರುಣನಿಗೆ ಹರಕೆ ಮಾಡಿಕೊಂಡಿದ್ದನು. ಈತನಿಗೆ ಪುತ್ರನು ಹುಟ್ಟಿದ
ನಂತರ ಬಲಿ ಕೊಡುವ ಹರಕೆಯ ಬಗ್ಗೆ ಹಿಂದೇಟು ಹಾಕತೊಡಗಿದನು.
ಈತನ ಮಗನ ಹೆಸರು ರೋಹಿತನೆಂದಿತ್ತು ಈ ಬಾಲಕನಿಗೆ ಹರಕೆಯ ಸಂಗತಿ
ತಿಳಿದಾಗ ಆತನು ಮನೆ ಬಿಟ್ಟು ಓಡಿದನು. ಆಗ ಹರಿಶ್ಚಂದ್ರನಿಗೆ ಉದರರೋಗ
ವುಂಟಾಯಿತು. ಇಂಥ ಸ್ಥಿತಿಯಲ್ಲಿ ರೋಹಿತನು ಋಚೀಕ (ಅಜೀಗರ್ತ)
ಋಷಿಯಿಂದ, ಬಲಿಕೊಡಲೆಂದು ಶುನಃಶೇಪನನ್ನು ಕೊಂಡುಕೊಂಡನು. ಈ
ಶುನಃಶೇಪನನ್ನು ವಿಶ್ವಾಮಿತ್ರನು ಯಜ್ಞಸ್ತಂಭದಿಂದ ಬಿಡಿಸಿಕೊಂಡು ಆತನನ್ನು
ತನ್ನ ಮಗನೆಂದು ಮನ್ನಿಸಿದನು. ಈತನಿಗೆ ದೇವರಾತನೆಂದು ನಾಮಕರಣವನ್ನು
ಮಾಡಿದನು. ಈ ಮಾಹಿತಿಯು ಐತರೇಯ ಬ್ರಾಹ್ಮಣದಲ್ಲಿ ದೊರೆಯುತ್ತದೆ.
ಬೇರೆ ಗ್ರಂಥಗಳಲ್ಲಿ ಈ ಕಥೆ ಸ್ವಲ್ಪ ವ್ಯತ್ಯಾಸ ಹೊಂದಿದೆ.
ಶುನಃಶೇಪನು ಸೋದರಮಾವನಾದ ವಿಶ್ವಾಮಿತ್ರನಿಗೆ ತನ್ನ ಪ್ರಾಣವನ್ನುಳಿಸಲು
ವಿನಂತಿಸಿದಾಗ ಅತನು ಶುನಃಶೇಪನಿಗೆ ಎರಡು ಗಾಥೆಗಳನ್ನು ಕಲಿಸಿಕೊಟ್ಟನು.
ಬಲಿಯ ಯಜ್ಞನ ಕಂಬದ ಬಳಿ ಹೋದನಂತರ ಅಲ್ಲಿ ಈ ಗಾಥೆಗಳಿಂದ
ಅಗ್ನಿಯನ್ನು ಸ್ತುತಿಸಲು ಹೇಳಿದನು. ಶುನಃಶೇಪನಿಗೆ ಕೆಂಪು ವಸ್ತ್ರಗಳನ್ನು ತೊಡಿಸಿ
ಆತನನ್ನು ಯೂಪಕ್ಕೆ (ಯಜ್ಞದ ಕಂಬ) ಕಟ್ಟಿಹಾಕಲಾಯಿತು. ಶುನಃಶೇಪನು
ಆಗ ಆ ಎರಡು ಗಾಥೆಗಳಿಂದ ಇಂದ್ರ ಮತ್ತು ವಿಷ್ಣುವನ್ನು ಕುರಿತು ಸ್ತುತಿಸಿದನು.
ಆಗ ಪ್ರಸನ್ನಚಿತ್ತನಾದ ಇಂದ್ರನು ಶುನಃಶೇಪನಿಗೆ ದೀರ್ಘಾಯುಸ್ಸನ್ನು ಕೊಟ್ಟನು.

೧೩೯. ಶ್ರವಣ, ಶ್ರಾವಣ

ಶ್ರವಣನೆಂಬ ಒಬ್ಬ ಬ್ರಾಹ್ಮಣನು ಕುರುಜಾಂಗಲವೆಂಬ ದೇಶದಲ್ಲಿರುತ್ತಿದ್ದನು.
ಆತನ ಪತ್ನಿಯ ಹೆಸರು ಕುಂಡಾ ಮತ್ತು ಮಗನ ಹೆಸರು ಶ್ರಾವಣನೆಂದಿತ್ತು.
ಈತನ ಕುರಂಟಕನೆಂಬ ಸೋದರನು ಆಚಾರಹೀನನಾಗಿದ್ದನು. ಒಮ್ಮೆ ಒಂದು
ಹಸುವನ್ನು ಕೆಸರಿನಿಂದ ಹೊರತೆಗೆದ ಕಾರಣ ಅವರೆಲ್ಲರೂ ಮುಕ್ತರಾದರೆಂದು
ಪದ್ಯಪುರಾಣದಲ್ಲಿ ಹೇಳಿದೆ. ವಾಲ್ಮೀಕಿ ರಾಮಾಯಣದಲ್ಲಿ ಶ್ರವಣನ ಉಲ್ಲೇಖವಿಲ್ಲ.
ಬ್ರಹ್ಮಪುರಾಣದಲ್ಲಿ ಶ್ರವಣ ಎಂಬ ಹೆಸರಿನ ಉಲ್ಲೇಖ ಇದೆ. ಈತನು ಪುತ್ರ
ಶೋಕದಲ್ಲಿದ್ದಾಗ ಮಗನಿಗೆ 'ಬ್ರಾಹ್ಮಣ'ನೆಂದು ಅನ್ನದೇ 'ಬ್ರಾಹ್ಮಣರಂತೆ' ಎಂದು