ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ದಲ್ಲಿದೆ. ಆದರೆ ಮಹಾಭಾರತದಲ್ಲಿಯ ವನಪರ್ವದಲ್ಲಿ ಶಂಕರನ ವರದಿಂದ
ಈಕೆ ಒಂದು ಕುಂಬಳಕಾಯಿಯನ್ನು ಪ್ರಸವಿಸಿದಳೆಂದಿದೆ. ಈ ಕುಂಬಳಕಾಯಿ ಯಲ್ಲಿಯ ಬೀಜಗಳಿಂದ ಅರವತ್ತುಸಾವಿರ ಮಕ್ಕಳಾದರೆಂಬ ಮಾಹಿತಿ ಇದೆ. ಬ್ರಹ್ಮವೈವರ್ತ ಪುರಾಣದಂತೆ ಶಂಕರನ ಪ್ರಸಾದದಿಂದ ನೂರು ವರ್ಷಗಳ ನಂತರ ಇವಳಿಗೆ ಒಂದು ಮಾಂಸ ಪಿಂಡವಾಯಿತು. ಆ ಪಿಂಡದಿಂದ ಅರವತ್ತು ಸಾವಿರ ಪುತ್ರರನ್ನಾಗಿ ಮಾಡಿದನೆಂಬ ವರ್ಣನೆ ಇದೆ. ೧೫೨. ಸುಮಂತ್ರ ಇವನು ದಶರಥರಾಜನ ಅಷ್ಟಪ್ರಧಾನರಲ್ಲಿ ಒಬ್ಬ; ದಶರಥನ ಸಾರಥಿಯೂ ಸ್ತುತಿಪಾಠಕನೂ ಅಹುದು. ರಾಮನು ವನವಾಸಕ್ಕೆ ತೆರಳುವ ಸಮಯದಲ್ಲಿ ಅವನನ್ನು ಬೀಳ್ಕೊಡಲು ಸುಮಂತ್ರನು ರಥವನ್ನು ತೆಗೆದುಕೊಂಡು ಹೋಗಿದ್ದನು. ದಶರಥನಿಗೆ ಪುತ್ರ ಪ್ರಾಪ್ತಿಯಾಗುವ ವೃತ್ತಾಂತವನ್ನು ಋತ್ವಿಜರಿಂದ ಪುರಾಣ ದಲ್ಲಿದ್ದಂತೆ ಕೇಳಿಸಿಕೊಂಡು ಈ ಭವಿಷ್ಯವಾಣಿಯನ್ನು ಈತನು ದಶರಥನಿಗೆ ಏಕಾಂತದಲ್ಲಿ ತಿಳಿಸಿದನು. ಈತನು ಅಯೋಧ್ಯೆಗೆ ಮರಳುವಾಗ ರಾಮನು ಹೇಳಿಕಳಿಸಿದ ವಾರ್ತೆಯನ್ನು ಕೇಳಿಕೊಂಡು 'ನಾನು ಈ ಬರಿದಾದ ರಥವನ್ನು ಅಯೋಧ್ಯೆಗೆ ಹೇಗೆ ಒಯ್ಯಲಿ? ಇಂಥ ರಥವನ್ನು ಕಂಡು ಜನರಿಗೆ ಎಷ್ಟೊಂದು ದುಃಖವಾದೀತು? ಹೇ ರಾಮನೇ, ನೀನು ಈ ರಥದಲ್ಲಿರುವಾಗ ಈ ಕುದುರೆಗಳು ಈ ರಥವನ್ನು ಹೇಗೆ ತಾನೇ ಎಳೆದೊಯ್ಯಬಲ್ಲವು? ಹೇ ರಾಮನೇ, ನಿನ್ನನ್ನು ಬಿಟ್ಟು ನಾನು ಅಯೋಧ್ಯೆಗೆ ಹಿಂದಿರುಗಲಾರೆ' ಈ ಮಾತುಗಳಿಂದ ರಾಮನ ಬಗ್ಗೆ ಆತನಲ್ಲಿದ್ದ ಭಕ್ತಿವಿಶ್ವಾಸಗಳು ಎದ್ದು ಕಾಣುವವು. ರಾಮನು ಸುಮಂತ್ರನಿಗೆ ತಿಳಿಸಿಹೇಳಿ ಆತನನ್ನು ಅಯೋಧ್ಯೆಯತ್ತ ಕಳಿಸಿದನು. ಅಯೋಧ್ಯೆಯಿಂದ ಹೊರಡುವಾಗ ಈತನು ತನ್ನ ಮುಖವನ್ನು ದುಃಖದಿಂದ ಮುಚ್ಚಿಕೊಂಡಿದ್ದನು. ದಶರಥರಾಜನಿಗೆ ನಡೆದ ಎಲ್ಲ ವೃತ್ತಾಂತವನ್ನು ತಿಳಿಸದ ನಂತರ ಕೌಸಲೈಯನ್ನು ಸಂತೈಸಿದನು. ರಾಮನು ಅಶ್ವಮೇಧ ಯಜ್ಞದ ಕಾಲಕ್ಕೆ ಈತನು ಶತ್ರುಘ್ನನೊಡನೆ ಇದ್ದನು. ರಾಮನು ವನವಾಸಕ್ಕೆ ಹೋಗಲೇಬೇಕೆಂದು ಹಟ ಹಿಡಿದ ಕೈಕೇಯಿಯನ್ನು ಸಾಕಷ್ಟು ಬಿರುನುಡಿಗಳಿಂದ ಧಿಕ್ಕರಿಸಿದನು. ಈ ಹಟದ ಪರಿಣಾಮಗಳು ಬಹುದೀರ್ಘವಾಗಲಿವೆ, ಭಯಂಕರವಾಗಲಿವೆ ಎಂಬ ಬಗ್ಗೆ ಕೈಕೇಯಿಗೆ ವಿವರಿಸಿ ಹೇಳಿದ್ದನು.