ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ವ್ಯಕ್ತಿಯ ಶಬ್ದಗಳು ಶಾಪಸದೃಶವಾಗುತ್ತವೆ. ದಶರಥನಿಗೆ ಶ್ರವಣನ ಪಿತನು, ಅದೇ ರೀತಿ ಅನಗಣ್ಯರಾಜನು ರಾವಣನಿಗೆ ಉದ್ದೇಶಿಸಿ ಕೊಟ್ಟ ಶಾಪಗಳು ಕೊನೆಯುಸಿರಿನ ನುಡಿಗಳಾಗಿವೆ. ವೇದವತಿಯ ಪ್ರತಿಜ್ಞೆಯು ಅವಳು ಅಗ್ನಿಪ್ರವೇಶ ಮಾಡುವ ಕೊನೆಯ ಗಳಿಗೆಯದಾಗಿದೆ.

ಕೆಲವು ಸಲ ಶಾಪದ ಫಲವು ವರದಂತಾಗುತ್ತದೆ. “ಕಣ್ಣೆದುರು ಬಂದ ಕನ್ಯೆಯು ಗರ್ಭ ಧರಿಸುವಳು!” ಎಂಬ ಪುಲಸ್ತ್ಯನು ಆಡಿದ ಶಾಪವನ್ನು ಗಮನಿಸಿದ ಕಾರಣ ತೃಣಬಿಂದು ಕನ್ಯೆಯು ಗರ್ಭವತಿಯಾದಳು. ನಂತರ ಪುಲಸ್ತ್ಯನ ಪತ್ನಿಯಾಗುವ ಯೋಗವು ಬಂದೊದಗಿತು. ವಾಲ್ಮೀಕಿಯ ಶಾಪದಿಂದಾಗಿ ರಾಮಾಯಣದ ನಿರ್ಮಿತಿಯಾಗಿ ಅದು ಸರ್ವಲೋಕಕ್ಕೆ ಶಿರಸಾವಂದ್ಯವಾಯಿತು.

'ಹಂತ ತರ್ಹಿ ಮಂಡಿತಃ ಸಂಸಾರಃ'೧೦ ಎಂಬ ಶಬ್ದಗಳಿಂದ ಭವಭೂತಿಯು ಆ ಶಾಪವನ್ನು ಗೌರವಿಸಿದ್ದಾನೆ. ಬ್ರಹ್ಮನು ಸಹ ಪ್ರಸನ್ನನಾಗಿ ವಾಲ್ಮೀಕಿಗೆ ವರವನ್ನಿತ್ತನು; ರಾಮಾಯಣವನ್ನು ಬರೆಯಲು ಪ್ರೇರೇಪಿಸಿದನು. ಭೃಗುಮುನಿಯು ವಿಷ್ಣುವಿಗೆ ಶಾಪವನ್ನು ಕೊಟ್ಟ ಕಾರಣ ವಿಷ್ಣುವು ಮಾನವಜನ್ಮವನ್ನು ತಾಳಿದನು. ದುಷ್ಟರ ನಾಶ ಮಾಡಿದ ಉಜ್ವಲ, ನಿಷ್ಕಲಂಕ ವರ್ತನೆಯಿಂದ ಆದರ್ಶಮಾನವತೆಯನ್ನು ತೋರಿ ಜಗತ್ತಿಗೆ ಶುಭವನ್ನುಂಟುಮಾಡಿದನು.

ಶಾಪವನ್ನು ನುಡಿಯುವುದು ಒಳ್ಳೆಯದೆಂದು ಭಾವಿಸುವುದಿಲ್ಲ. ವೈದಿಕ ಆರ್ಯರು ಶಾಪ ಕೊಡುವುದನ್ನು ನಿಷೇಧಿಸಿದ್ದಾರೆ. “ಸಕಾರಣ ಇಲ್ಲವೇ ನಿಷ್ಕಾರಣವಾಗಿ ಶಪಿಸುವವನು ಸಿಡಿಲೆರಗಿದ ಮರದಂತೆ ಸುಟ್ಟುಹೋಗಲಿ!” ಎಂಬ ಪ್ರಾರ್ಥನೆಯು ಅಥರ್ವ ವೇದದಲ್ಲಿದೆ.೧೧ ಶಾಪವು ತಿರುಗುಬಾಣವಾಗುವ ಭೀತಿಯ ಅರಿವು ಶಪಿಸುವವನಿಗೆ ಇರುತ್ತಿತ್ತು; ಆದ್ದರಿಂದ ಈ ಅರಿವನ್ನಿಟ್ಟುಕೊಂಡು ಶಾಪಗಳನ್ನು ಎಚ್ಚರಿಕೆ ವಹಿಸಿ ಕೊಡುತ್ತಿದ್ದರು. ಗ್ರೀಮ್ ಎಂಬಾತನು “Curses like chickens come home to roast. They turn home as birds to the nest”೧೨ ಎಂದಿದ್ದಾನೆ.

——————

೧೦. ಉತ್ತರ ರಾಮಚರಿತಮ್-ಅಂಕ ೨.
೧೧. ಭಾರತೀಯ ಸಂಸ್ಕೃತಿ ಕೋಶ, ಖಂಡ ೯, ಪು.೨೪೭.
೧೨. Encyclopaedia of Religion and Ethics.