ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೨೯

ಶಾಪದ ಕಾರಣಗಳು

ಶಾಪವನ್ನು ಕೊಡುವ ವಿಷಯದಲ್ಲಿ ಕೆಲವು ಸಂಕೇತಗಳಿವೆ. ಧರ್ಮದ ಪಾಲನೆಗಾಗಿ, ಅಧರ್ಮದ ನಿಯಂತ್ರಣಕ್ಕಾಗಿ, ಸಾಮಾಜಿಕ ಕ್ಷೇಮಕ್ಕಾಗಿ ಧಾರ್ಮಿಕ ಶಾಪಗಳು ಇದ್ದರೆ, ವೈಯಕ್ತಿಕ ಐಹಿಕ ಸುಖಗಳಿಗಾಗಿ ಅಭಿಚಾರಾತ್ಮಕ ಶಾಪಗಳು ಕೊಡಲ್ಪಡುತ್ತಿದವು. ಕುಂಭಕರ್ಣನಿಗೆ ಘೋರನಿದ್ರೆಯ ಶಾಪವನ್ನು ಕೊಟ್ಟು ಬ್ರಹ್ಮದೇವನು ಆತನ ಘೋರ ಕೃತ್ಯಗಳನ್ನು ತಡೆದು ಸಮಾಜದ ಶಾಂತಿಯನ್ನು ಕಾಪಾಡಿದ್ದಾನೆ. ಕರ್ಣನ ಹುಟ್ಟಿನ ರಹಸ್ಯವನ್ನು ಕುಂತಿಯು, ಭಾರತಯುದ್ದಕ್ಕೆ ಮುಂಚಿತವಾಗಿ ಪ್ರಕಟಿಸಿದ್ದರೆ, ಎಷ್ಟೊಂದು ಮಾನವಸಂಹಾರವನ್ನು ತಡೆಯಬಹುದಿತ್ತು. ಅವಳು ಅದನ್ನು ರಹಸ್ಯವಾಗಿಟ್ಟಿದ್ದರಿಂದ ವಿಪರೀತ ಪ್ರಾಣಹಾನಿಯಾಯಿತು. ಈ ಕಾರಣಕ್ಕಾಗಿ ಯುಧಿಷ್ಠಿರನು ಕುಂತಿಗೆ ಶಾಪವನ್ನು ಕೊಟ್ಟನು.೧೩

ರಾಮಾಣದಲ್ಲಿ ಅರವತ್ತೊಂದು ಶಾಪಗಳು ಕಂಡುಬರುತ್ತವೆ. ಹಲವು ಕಾರಣಗಳಿಗಾಗಿ ಈ ಶಾಪಗಳನ್ನು ಕೊಟ್ಟಿದ್ದಾರೆ. ವಧೆ, ನಾಶ, ಆಕ್ರಮಣ, ದುರ್ವತ್ರನೆ, ಉದ್ಧಟತನ ನಿಷ್ಕಾರಣ ಭಯೋತ್ಪಾದನೆ, ಸಲ್ಲದ ಬೇಡಿಕೆ, ಪರಸ್ತ್ರೀಯ ಅಭಿಲಾಷೆ, ಸಂಭೋಗದ ಬೇಡಿಕೆ, ಬಲಾತ್ಕಾರ, ರತಿಕ್ರೀಡೆಯಲ್ಲಿ ಅಡ್ಡಿ ತರುವುದು, ತಂದೆತಾಯಿ, ಗುರುಹಿರಿಯರ ಅವಹೇಳನೆ, ಕ್ರೋಧ, ಛಲ, ಅನಿಷ್ಟ ಭೋಜನ, ಅಯೋಗ್ಯ ಸಮಯ ಇತ್ಯಾದಿ ಕಾರಣಗಳಿಗಾಗಿ ಶಾಪಗಳು ಕೊಡಲ್ಪಟ್ಟಿವೆ. ಇನ್ನಿತರ ಕಾರಣಗಳಿದ್ದರೂ 'ಕೋಪ' ಇದು ಶಾಪದ ಮೂಲಕಾರಣವಿರುತ್ತದೆ. ಕ್ರೌಂಚಪಕ್ಷಿಗಳ ಜೋಡಿಯಲ್ಲಿಯ ಗಂಡುಪಕ್ಷಿಯನ್ನು ನಿಷಾದನು ವಧಿಸಿದ್ದಕ್ಕಾಗಿ ಆತನಿಗೆ ವಾಲ್ಮೀಕಿಯು ಶಾಪವನ್ನು ಕೊಟ್ಟನು. ಅಗಸ್ತ್ಯಋಷಿಯ ಮೈಮೇಲೆ ಏರಿಹೋಗಿ ಅವನನ್ನು ನುಂಗಲು ಬಂದ ತಾಟಿಕಾ ಇವಳಿಗೆ ಅಗಸ್ತ್ಯನು ಶಾಪವನ್ನು ಕೊಟ್ಟನು. ತನ್ನ ಏಕಮಾತ್ರ ಪುತ್ರನಾದ ಶ್ರವಣನ ವಧೆಯಾಯಿತೆಂದು ತಿಳಿದುಕೊಂಡ ಆತನ ತಂದೆಯು ಅತಿದುಃಖಿತನಾಗಿ ದಶರಥನಿಗೆ ಶಾಪವನ್ನು ನೀಡಿದನು. ದುಂದುಭಿ ಎಂಬ ರಾಕ್ಷಸನನ್ನು ಕೊಂದು ಆತನ ದೇಹವನ್ನು ಅಪ್ಪಳಿಸಿ ದೂರಕ್ಕೆ ಎಸೆದಾಗ ರಕ್ತದ ಹನಿಗಳು ಮತಂಗ ಋಷಿಯ ಆಶ್ರಮದಲ್ಲಿ ಬಿದ್ದವು. ಋಷಿಯು ಅತಿಕೋಪಗೊಂಡು ವಾಲಿಯನ್ನು ಶಪಿಸಿದನು. ತನ್ನ ಮೇಲೆ ಬಲಾತ್ಕಾರವೆಸಗಿ ತಮ್ಮ ಪತಿಯರನ್ನು ವಧಿಸಿದ ಮತ್ತು ಬಂಧುಬಳಗವನ್ನೆಲ್ಲ ನಾಶಮಾಡಿದ

——————
೧೩. ಮಹಾಭಾರತ, ಸ್ತ್ರೀಪರ್ವ, ೨೭.