ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೩೫

ಪರಿಶೀಲಿಸಬೇಕು. ರಾಮನು ವನವಾಸಕ್ಕೆ ಹೋದದ್ದು ನಿಜವಿರುವುದರಿಂದ ಕೌಸಲ್ಯೆಯ ಕಟ್ಟಳೆಯನ್ನು ಮೀರಿದ್ದು ನಿಜವಿದೆ; ಅಂದಬಳಿಕ ಕೊನೆಯಲ್ಲಿ ರಾಮನು ನರಕ ವಾಸವನ್ನು ಪಡೆದನೋ ಇಲ್ಲವೋ? ಎಂಬುದನ್ನು ತಿಳಿದುಕೊಳ್ಳಬೇಕು. ರಾಮನಿಗೆ ನರಕವಾಸವಾಗದೇ ಆತನಿಗೆ ಸ್ವರ್ಗಲೋಕದಲ್ಲಿ ಭವ್ಯಸ್ವಾಗತ ದೊರಕಿದ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಖಚಿತ ಆಧಾರವಿದೆ. ಅವತಾರ ಕಾರ್ಯವು ಮುಗಿಯುವ ಸಮಯ ಸಮೀಪಿಸಿದೆ ಎಂದು ಸೂಚಿಸಲು ಪ್ರತ್ಯಕ್ಷ ಕಾಲನು ರಾಮನನ್ನು ಕಾಣಲು ಬಂದನು. ಬ್ರಹ್ಮದೇವನ ಸಂದೇಶವನ್ನು ಏಕಾಂತದಲ್ಲಿ ರಾಮನಿಗೆ ತಿಳಿಸಿದನು; ಅದನ್ನು ಅನುಸರಿಸಿ ಲಕ್ಷ್ಮಣನ ನಂತರ ರಾಮನು ಮಹಾಪ್ರಸ್ಥಾನವನ್ನು ಕೈಕೊಂಡನು. ರಾಮನು ಸರಯೂ ನದಿಯ ನೀರಿನಲ್ಲಿ ಇಳಿಯುತ್ತಿದ್ದಾಗ ಅಂತರಿಕ್ಷದಿಂದ ಬ್ರಹ್ಮನು “ಆಗಚ್ಛ ವಿಷ್ಟೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋsಸಿರಾಘವ||” “ಎಲೈ ವಿಷ್ಣುವೇ ರಾಘವನೇ, ನಿನಗೆ ಶುಭವಾಗಲಿ! ನೀನು ಸ್ವರ್ಗಕ್ಕೆ ಬರಲಿರುವ ಸಂಗತಿ ತುಮಬಾ ಸಂತೋಷವನ್ನುಂಟುಮಾಡಿದೆ”೧೫ಎಂದನು. ಇಷ್ಟೇ ಅಲ್ಲದೆ, ಬ್ರಹ್ಮನು ರಾಮನಿಗೆ ಇಷ್ಟವಾದ ದೇಹವನ್ನು ಧರಿಸಲು ಸಮ್ಮತಿಸಿದನು. ರಾಮನು ವೈಷ್ಣವ ತೇಜದಲ್ಲಿ ಪ್ರವೇಶಿಸಿದ ನಂತರ ದೇವತೆಗಳು ಉದ್ಗರಿಸಿದ್ದು ಈ ರೀತಿ-


      ಸರ್ವಂ ಪುಷ್ಟಂ ಪ್ರಮುದಿತಂ ಸುಸಂಪೂರ್ಣಮನೋರಥಮ್ |
      ಸಾಧುಸಾಧ್ವಿತಿ ತೈರ್ದೇವೈಸ್ತ್ರಿದಿವಂ ಗತಕಲ್ಮಷಮ್ ||

“ನಿನ್ನ ಬರುವಿಕೆಯಿಂದ ಸಮಸ್ತ ಸ್ವರ್ಗಲೋಕವು ಹರ್ಷಯುಕ್ತವೂ ಕೃತ ಕೃತ್ಯವೂ ಆಗಿದೆ. ಹೇ ರಾಮನೇ, ನೀನು ಧನ್ಯ!” ದೇವತೆಗಳ ಈ ನುಡಿಯನ್ನು ಒಪ್ಪಿಕೊಂಡರೆ ರಾಮನಿಗೆ ಸ್ವರ್ಗಲಾಭವಾಯಿತೆಂಬುದರಲ್ಲಿ ಸಂದೇಹವಿಲ್ಲ. ಕೌಸಲ್ಯೆಯಾಡಿದ ಶಾಪವಾಣಿ ಮತ್ತು ಶರತ್ತು ಇವುಗಳೊಡನೆ ನಂತರದ ಪರಿಣಾಮವನ್ನು ವೀಕ್ಷಿಸಿದರೆ ಕೌಸಲ್ಯೆಗೆ ಶಾಪ ನುಡಿಯುವ ಅರ್ಹತೆ ಇರಲಿಕ್ಕಿಲ್ಲ; ಪುತ್ರನ ಮೇಲಿನ ಮಮತೆಯಿಂದ ಆಡಿದ ಮಾತು ಶಾಪವಲ್ಲ! ಎಂದು ಗಮನಕ್ಕೆ ಬರುತ್ತದೆ. ಅವಳಾಡಿದ ನುಡಿ ಶಾಪದಂತಿದ್ದವು; ಶಾಪದ ಪರಿಣಾಮವನ್ನುಂಟು ಮಾಡುವಂತೆ ಇರಲಿಲ್ಲ.

——————
೧೫. ಉತ್ತರಕಾಂಡ, ೧೧೦/೮ ಮತ್ತು ೧೫.