ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ನುಡಿಯದೇ ಇದ್ದ ಶಾಪ

ಶಾಪವನ್ನು ಕೊಟ್ಟರೆ ಕೊಡುವಾತನ ಪುಣ್ಯವು ಕ್ಷೀಣವಾಗುತ್ತದೆ; ತಪದ ಸಾಮರ್ಥ್ಯವು ಉಡುಗುತ್ತದೆ ಎಂಬ ನಂಬಿಕೆ ಇದೆ. ಶಪಿಸಬೇಕೆಂಬ ವಿಚಾರವು ತಲೆದೋರಿದರೂ ನಂತರದ ಪರಿಣಾಮಗಳನ್ನು ಲಕ್ಷ್ಯಿಸಿ ಶಾಪ ಕೊಡುವುದನ್ನು ತಡೆಹಿಡಿಯುತ್ತಾರೆ. ಮನಸ್ಸಿನಲ್ಲಿ ಇದ್ದುದನ್ನು ನುಡಿಯದೇ ಇದ್ದರೆ, ಅದು ಶಾಪವೆನಿಸದು. ಮನಸ್ಸಿನಲ್ಲಿ ಶಾಪದ ವಿಚಾರಗಳು ಮೂಡಿದರೆ ದೋಷವಿಲ್ಲವೆಂದು ಬಗೆಯುತ್ತಾರೆ. ಶಾಪ ಅಥವಾ ವರ ಅಂದರೆ ಅದೊಂದು ವಾಕ್-ಶಕ್ತಿ ಇರುವುದರಿಂದ ಉಚ್ಚಾರಣೆಯಾದರೆ ಮಾತ್ರ ಅದರ ಪ್ರಭಾವ ತೋರಿಬರುತ್ತದೆ. ಋಷಿಮುನಿಗಳು, ರಾಜರು, ವ್ರತಸ್ಥರು ಶಾಪವಾಣಿಯನ್ನು ಯೋಚನೆ ಮಾಡಿ ಆಡುತ್ತಾರೆ. ನಿಯಂತ್ರಣ ತಪ್ಪುವಷ್ಟು ಕೋಪ ಬಂದೊಡನೆ ಶಬ್ದಗಳು ತಾವಾಗಿ ಯಾವಾಗ ಹೊರಬೀಳುತ್ತವೆ ಎಂಬುದು ಚಿತ್ರಕ್ಕೆ ಹೊಳೆಯುವುದಿಲ್ಲ. ಉಪಾಯವು ನಿಮ್ಮ ಬಳಿ ಉಳಿದಿರುವುದಿಲ್ಲ. ಶಾಪವನ್ನು ಕೊಡುವುದು ಸರಿಯಲ್ಲವಾದ್ದರಿಂದ ಮನಸ್ಸಿನಲ್ಲಿ ಶಾಪದ ವಿಚಾರ ಮೂಡಿದರೂ ಶಾಪಗಳನ್ನು ಬಾಯಿಯಿಂದ ನುಡಿಯುವುದಿಲ್ಲ. ರಾಮಾಯಣದಲ್ಲಿ ನುಡಿಯದೇ ಇದ್ದ ಶಾಪಗಳ ಹತ್ತು ಉದಾರಹಣೆಗಳಿವೆ.

ವಿಶ್ವಾಮಿತ್ರನು ಸ್ವಂತ ಸಾಮರ್ಥ್ಯದಿಂದ ಮಾರೀಚ ಹಾಗೂ ಸುಬಾಹು ಇವರಿಗೆ ದಂಡಿಸಬಹುದಿತ್ತು; ಶಾಪ ಕೊಡಬಹುದಿತ್ತು. ವಿಶ್ವಾಮಿತ್ರನು ವ್ರತಸ್ಥನಾಗಿದ್ದರಿಂದ ತನ್ನ ಶಕ್ತಿಬಲಗಳನ್ನು ಬಳಸದೇ ದಶರಥನಿಂದ ರಾಮ ಲಕ್ಷ್ಮಣರನ್ನು ಸಹಾಯಕ್ಕಾಗಿ ಕರೆತಂದನು. ತಪದ ಬಲವು ಕಡಿಮೆಯಾಗಬಾರದೆಂದು ವೇದವತಿಯು ರಾವಣನಿಗೆ ಶಾಪ ಕೊಡದೆ ಬೇರೆ ಪ್ರತಿಜ್ಞೆಯನ್ನು ಮಾಡಿದಳು. ದಂಡಕಾರಣ್ಯದಲ್ಲಿಯ ಮುನಿಗಳು ಮತ್ತು ಕುಶಕನ್ಯೆಯರು ಉದ್ದೇಶಪೂರ್ವಕವಾಗಿ ಶಾಪವನ್ನು ನುಡಿದಿಲ್ಲ. ಕೆಲವು ನುಡಿಯದೇ ಇದ್ದ ಶಾಪಗಳ ಬಗ್ಗೆ ಶಾಪದ ವಿಚಾರ ಸಹ ಮೂಡಿತ್ತೆಂದು ಖಚಿತವಾಗಿ ಹೇಳಲು ಬರುವಂತಿಲ್ಲ. ಶಾಪ ಬರಬಹುದೆಂಬ ಭೀತಿ ಹೊಂದಿದವರಿಗೆ ಹಾಗೆ ಅನ್ನಿಸಿರಬಹುದು. ಅತಿಥಿ ವೇಷದಿಂದ ಬಂದ ರಾವಣನು ಶಾಪ ಕೊಡ ಬಹುದೆಂಬ ಭಯವು ಸೀತೆಗೆನಿಸಿತ್ತು. ತ್ರಿಶಂಕುವಿನ ಯಜ್ಞಕ್ಕಾಗಿ ಆಗಮಿಸಿದ ವಿಶ್ವಾಮಿತ್ರನು ಶಾಪ ಕೊಡಬಹುದೆಂಬ ಭಯವು ಋಷಿಮುನಿಗಳಿಗೆ ಉಂಟಾಗಿತ್ತು. ಗುರುವಿಗೆ ಶಾಪ ಕೊಡುವುದು ತರವಲ್ಲವೆಂದು ಸೌದಾಸನು ಶಾಪ ಕೊಡಲು ಪ್ರೇರಿತನಾಗಿ ಎತ್ತಿಕೊಂಡ ಜಲವನ್ನು ತನ್ನ ಪಾದಗಳ ಮೇಲೆ ಚೆಲ್ಲಿಕೊಂಡನು; ಶಾಪವನ್ನು ನುಡಿಯಲಿಲ್ಲ. ದುರ್ವಾಸನ