ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಭೇಟಿಯಾಗುವಂತಿರಲಿಲ್ಲ. ಆಗ ತಲೆಗೇರಿದ ಸಿಟ್ಟಿನಿಂದ ವಸಿಷ್ಠರು, “ನನ್ನನ್ನು ಕಡೆಗಣಿಸಿ ನೀನು ಬೇರೆ ಋತ್ವಿಜನನ್ನು ಕಂಡುಕೊಂಡಿರುವೆಯಾದ್ದರಿಂದ ನಿನ್ನ ಶರೀರವು ಚೈತನ್ಯರಹಿತವಾಗಲಿ!” ಎಂದು ಶಾಪ ಕೊಟ್ಟರು. ನಿದ್ರೆಯಿಂದ ಎಚ್ಚತ್ತ ನಂತರ ನಿಮಿರಾಜನಿಗೆ ವಸಿಷ್ಠರ ಶಾಪವು ತಿಳಿಯಿತು. ನಿಮಿರಾಜನಿಗೂ ತುಂಬಾ ಕೋಪ ಬಂದಿತು; “ನೀವು ಬಂದ ಸಮಾಚಾರ ನನಗೆ ಗೊತ್ತಿರಲಿಲ್ಲ; ನಾನು ನಿದ್ರಿಸುತ್ತಿದ್ದೆ; ಹೀಗಿದ್ದರೂ ನೀವು ಸಿಡಿಮಿಡಿಗೊಂಡು ಯಮದಂಡ ದಂತಿರುವ ಶಾಪಾಗ್ನಿಯನ್ನು ನನ್ನ ಮೇಲೆ ಬಿಟ್ಟಿರುವಿರಿ; ಆದ್ದರಿಂದ ಹೇ ಬ್ರಹ್ಮರ್ಷಿ! ನಿಮ್ಮ ಮನೋಹರ ದೇಹವು ಖಚಿತವಾಗಿ ಅಚೇತನಗೊಳ್ಳುವುದು” ಎಂದು ಶಪಿಸಿದನು.

ಒಮ್ಮೆ ಬೇಟೆಗೆಂದು ಕಾನನದಲ್ಲಿ ಸಂಚರಿಸುತ್ತಿರುವಾಗ ಸೌದಾಸರಾಜನು ಒಬ್ಬ ರಾಕ್ಷಸನನ್ನು ಕೊಂದನು. ಆ ರಾಕ್ಷಸನ ಮಿತ್ರನು ರಾಜನ ಮೇಲೆ ಸೇಡು ತೀರಿಸುವ ಪಣ ಮಾಡಿದನು. ಅನ್ಯರೂಪಗಳನ್ನು ಧರಿಸಬಲ್ಲ ರಾಕ್ಷಸನಾದ ಆ ಮಿತ್ರನು ವಸಿಷ್ಠರ ವೇಷದಲ್ಲಿ ರಾಜನನ್ನು ಭೇಟಿಯಾಗಿ ಭೋಜನವನ್ನು ಕೇಳಿದನು. ಅದನ್ನನುಸರಿಸಿ ರಾಜನು ಅಡಿಗೆಗೆ ಅಪ್ಪಣೆ ಮಾಡಿದನು. ಆಗ ಈ ರಾಕ್ಷಸಮಿತ್ರನು ಅಡಿಗೆಯವನ ರೂಪ ಧರಿಸಿ ನರಮಾಂಸವನ್ನು ಸಿದ್ಧಗೊಳಿಸಿದನು; ರಾಜನಿಂದ ವಸಿಷ್ಠರಿಗೆ ತಲುಪಿಸಿದನು. ಇದನ್ನು ಅರಿತ ವಸಿಷ್ಠರು ಕೋಪಗೊಂಡು ಆ ರಾಜನಿಗೆ, “ಇದೇ ಬಗೆಯ ಆಹಾರವು ಖಂಡಿತವಾಗಿ ನಿನ್ನದಾಗಲಿ!” ಎಂದು ಶಪಿಸಿದರು. ತನ್ನಿಂದ ನಡೆದುಹೋದ ಅಪರಾಧವಾದರೂ ಯಾವುದು ಎಂಬುದನ್ನರಿಯದ ರಾಜನು ನಿಷ್ಕಾರುಣವಾಗಿ ತನಗೆ ಶಾಪ ಬಂದುದನ್ನು ತಿಳಿದು, ವಸಿಷ್ಠರಿಗೆ ಪ್ರತಿಶಾಪವನ್ನು ಕೊಡಲೋಸುಗ ಆತನು ಕೈಯಲ್ಲಿ ನೀರನ್ನು ಎತ್ತಿಕೊಂಡನು. ಗುರುವನ್ನು ಶಪಿಸುವುದು ಸೂಕ್ತವಲ್ಲ ಎಂದು ರಾಣಿಯು ತಿಳಿಸಿ ಹೇಳಿದ್ದರಿಂದ ರಾಜನು ಪ್ರತಿಶಾಪವನ್ನು ನುಡಿಯಲಿಲ್ಲ.೧೭

ಉಃಶಾಪ

ಶಾಪದ ಪರಿಣಾಮಗಳು ಖಚಿತವಿರುತ್ತವೆ. ಅವುಗಳಲ್ಲಿ ಪರಿವರ್ತನೆ ಮಾಡುವಂತಿಲ್ಲ; ಹೀಗಿರುವುದರಿಂದ ಶಪಿಸುವ ಸಾಮರ್ಥ್ಯವನ್ನು ಚಿಕ್ಕಪುಟ್ಟ ಕಾರಣಗಳಿಗಾಗಿ ಬಳಸುವುದು ಹೇಯವೆಂದು ಬಗೆಯುತ್ತಾರೆ. ತಡೆಯಲಾಗದ

——————
೧೭. ನೋಡಿರಿ; ಶಾಪ ಕ್ರಮಾಂಕ ೫೦ ಮತ್ತು ೫೭.