ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೪೧

ತೊಡಗಿರಲಿಲ್ಲ; ಆದ್ದರಿಂದ ಶಾಪವು ಸೌಮ್ಯವಾಗಬೇಕೆಂದು ಅಹಲ್ಯೆಯು ಪ್ರಾರ್ಥಿಸಿದಳು. ಗೌತಮನು ಈ ರೀತಿ ಯಾಚಿತ ಉಃಶಾಪವನ್ನು ಕೊಟ್ಟನು: “ಮಾನವದೇಹಧಾರಿಯಾದ ಮಹಾವಿಷ್ಣುವು ಬ್ರಾಹ್ಮಣರ ನೆರವಿಗೆಂದು ವನಕ್ಕೆ ಆಗಮಿಸಿದಾಗ ನೀನು ಪವಿತ್ರಳಾಗುವೆ! ನೀನು ಎಸಗಿದ ದುಷ್ಕರ್ಮಗಳನ್ನು ಪರಿಹರಿಸುವ ಸಾಮರ್ಥ್ಯ ಅವನಲ್ಲಿ ಮಾತ್ರ ಇದೆ. ಅವನಿಗೆ ಆತಿಥ್ಯವನ್ನು ಸಲ್ಲಿಸಿ ಉಪಚರಿಸಿದರೆ ನೀನು ನನ್ನ ಬಳಿ ಬಂದು ವಾಸಿಸುವೆ!”

ತಪಸ್ಸಿನಲ್ಲಿ ವಿಘ್ನವನ್ನುಂಟುಮಾಡುವ ರಂಭೆಗೆ “ನೀನು ಸಾವಿರಾರು ವರುಷಗಳವರೆಗೆ ಕಲ್ಲಾಗಿ ಬೀಳು!” ಎಂಬ ಶಾಪವನ್ನು ವಿಶ್ವಾಮಿತ್ರನು ಕೊಟ್ಟನು. ತೇಜಸ್ವಿಯಾದ ಬ್ರಾಹ್ಮಣನೊಬ್ಬನಿಂದ ನಿನ್ನ ಉದ್ಧಾರವಾಗುವುದು! ಎಂಬ ಭರವೆಸಯು ಆ ಶಾಪದ ಜೊತೆಗಿತ್ತು. ಯಜ್ಞದಲ್ಲಿ ವಿಘ್ನಗಳನ್ನುಂಟುಮಾಡುವ ಹನುಮಂತನಿಗೆ ಋಷಿಗಳು ಶಾಪ ಕೊಟ್ಟಿದ್ದಾರೆ. ಜೊತೆಗೆ “ಯಾರಾದರೂ ಸ್ಮರಣೆ ಮಾಡಿಕೊಟ್ಟರೆ ನಿನ್ನ ಸಾಮರ್ಥ್ಯದ ಅರಿವು ನಿನಗಾಗುವದು” ಎಂಬ ಉಃಶಾಪವನ್ನೂ ಕೊಟ್ಟಿದ್ದಾರೆ. ಬ್ರಾಹ್ಮಣರು ಕೊಟ್ಟ ಶಾಪದ ಫಲವಾಗಿ ನೃಗರಾಜನು ದೀರ್ಘಕಾಲದವರೆಗೆ 'ಓತೀಕೇತ' ಪ್ರಾಣಿಯಾಗಿ ಜೀವಿಸಬೇಕಾಯಿತು. 'ಪಾಪನಿವಾರಣೆ ಆದಾಗ, ಶಾಪದ ಪರಿಹಾರ ವಾಗುವುದು!' ಎಂಬ ಆಶ್ವಾಸನೆ ಕೊಡಲಾಗಿತ್ತು. ಈ ಮೊದಲು ಹೇಳಿದ ಉಃಶಾಪಗಳು ಮತ್ತು ಬಾಲಕಾಂಡದಲ್ಲಿ ಅಹಲ್ಯೆಗೆ ದೊರೆತ ಉಃಶಾಪ, ಇವು ಶಾಪಗಳ ಉತ್ತರಾರ್ಧ ದಲ್ಲಿಯೇ ಸೇರಿಕೊಂಡಿವೆ. ವಸಿಷ್ಠನಿಗೆ ಅಯೋಗ್ಯ ಭೋಜನವನ್ನು ಕೊಡುವುದರಲ್ಲಿ ಸೌದಾಸರಾಜನ ಯಾವ ತಪ್ಪೂ ಇರಲಿಲ್ಲ. ಈ ಸಂಗತಿಯು ಗೊತ್ತಾಗದೆ; ರಾಜನಿಗೆ ಶಾಪ ಕೊಟ್ಟದ್ದು ತಪ್ಪಾಯಿತೆಂದೆನಿಸಿತು. ಶಾಪ ಕೊಟ್ಟಾಗಿದೆ; ಅದನ್ನು ಹಿಂತೆಗೆಯುವುದು ಅಸಾಧ್ಯವೆಂದು ವಸಿಷ್ಠನು ಉಃಶಾಪವನ್ನು ಕೊಡದೆ, ಇನ್ನೊಂದು ವರವನ್ನು ಕೊಟ್ಟನು. ಈ ವರದಿಂದ ಶಾಪದ ಪರಿಣಾಮದ ಕಾಲವು ಹನ್ನೆರಡು ವರುಷಕ್ಕೆ ಸ್ತಿಮಿತಗೊಂಡಿತು. ಪೂರ್ವದ ಸ್ಮರಣೆಯಾಗಲಾರದೆಂಬ ಆಶ್ವಾಸನೆಯನ್ನೂ ಕೊಟ್ಟನು.

ಈ ಉಃಶಾಪಗಳಲ್ಲಿ ಶ್ರೀರಾಮನ ದರ್ಶನ, ಸ್ಪರ್ಶ ಇವುಗಳಿಗೆ ಮಹತ್ವವನ್ನು ಕೊಡಲಾಗಿದೆ. ರಾಮಚರಿತ್ರೆಯಲ್ಲಿ ರಾಮನ ಗುಣಗೌರವ ಅಧಿಕವಿರುವುದು ಸಹಜ ಸಂಗತಿ.