ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಶಪಥ (ಆಣೆ), ಪ್ರತಿಜ್ಞೆ

ಶಾಪ ಮತ್ತು ಶಪಥ ಈ ಶಬ್ದಗಳು 'ಶಪ್' ಎಂಬ ಧಾತುವಿನಿಂದ ಉದ್ಭವಿಸಿವೆ. 'ಶಪಥ' ಎಂಬುದು ಪ್ರತಿಜ್ಞೆಯ ನಿರ್ದೆಶಕ ಶದ್ಭ; 'ತಾನು ನುಡಿದದ್ದು ಸತ್ಯ' ಎಂಬುದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡಲು ಉಚ್ಚರಿಸಿದ ಶಬ್ದ ಪ್ರಯೋಗವೇ ಶಪಥ. 'ಅದು ಅಸತ್ಯವೆನಿಸಿದರೆ ಅನಿಷ್ಟವಾಗಲಿ!' ಎಂದು ಪ್ರಕಟಪಡಿಸುವ ಶಬ್ದಪ್ರಯೋಗಕ್ಕೆ ಶಪಥ ಎಂದೆನ್ನಬಹುದು.೧೯ 'ಶಪಥ' ಎಂಬುದರ ಈ ವ್ಯಾಖ್ಯೆಯು ಶಪಥಕ್ರಿಯೆಯಲ್ಲಿಯ ಕೆಲವು ಮಹತ್ವದ ಘಟಕಗಳನ್ನು ನಿರ್ದೇಶಿಸುತ್ತಿದ್ದರೂ ಅದು ಸಂಪೂರ್ಣವ್ಯಾಖ್ಯೆಯಂತಿಲ್ಲ; ಈ ವ್ಯಾಖ್ಯೆಯನುಸಾರ ಎಲ್ಲ ಶಪಥಗಳ ಮರ್ಮಗಳನ್ನು ಅಳೆಯುವಂತಿಲ್ಲ. ಸೀತೆಯನ್ನು, ವಾಲ್ಮೀಕಿಯ ಆಶ್ರಮದ ಬಳಿಯ ನಿರ್ಜನಪ್ರದೇಶದಲ್ಲಿ ಬಿಟ್ಟುಬರಬೇಕೆಂದು ಶ್ರೀರಾಮನು ಲಕ್ಷ್ಮಣನಿಗೆ ಆಜ್ಞೆಯಿತ್ತನು. ಲಕ್ಷ್ಮಣನು ಆ ಪ್ರಕಾರ ಸೀತೆಯ ಸಮೇತ ನಿರ್ಜನವನಕ್ಕೆ ಬಂದನು; ರಾಮನ ಅಪ್ಪಣೆಯನ್ನು ಸೀತೆಗೆ ಹೇಳುವುದು ಆತನಿಂದಾಗಲಿಲ್ಲ. 'ಲಕ್ಷ್ಮಣನು ಎಂದಿನಂತೆ ಮಾತಾಡುತ್ತಿಲ್ಲ; ಆತನಿಗೆ ಏನಾದರೊಂದು ವ್ಯಥೆಯಾಗುತ್ತಿದೆ' ಎಂಬ ಸಂದೇಹವು ಸೀತೆಗೆ ಉಂಟಾಯಿತು. ಅವಳು ಲಕ್ಷ್ಮಣನಿಗೆ “ನೀನು ಸ್ವಸ್ಥಚಿತ್ತನಾಗಿ ಕಾಣುವುದಿಲ್ಲ; ರಾಜ ಕುಶಲವಷ್ಟೇ? 'ಶಾಪಿತೋSಸಿ ನರೇಂದ್ರಣ ಯತ್ತ್ವಂ ಸಂತಾಪಮಾಗತಃ' “ನಿನಗೆ ರಾಜನ ಆಣೆಯಿದೆ; ನೀನು ನಿಜ ಹೇಳು! ನಿನ್ನ ಮನಸ್ಸು ಏತಕ್ಕೆ ಇಷ್ಟೊಂದು ವ್ಯಥೆಗೊಂಡಿದೆ?”೨೦ ಈ ಆಣೆಯಲ್ಲಿ ಸತ್ಯತೆಯನ್ನು ಪ್ರದರ್ಶಿಸುವ ಅಥವಾ ಅಸತ್ಯವಿದ್ದರೆ ತನಗೆ ಅಶುಭವಾಗಲಿ! ಎಂಬ ಅರ್ಥದ ಶಬ್ದಗಳಿಲ್ಲ. ಹೀಗಿದ್ದರೂ ಅದು ಆಣೆಯಾಗಿದೆ. ಯಾವುದೊಂದು ದೇವತೆಯನ್ನು ಆಹ್ವಾನಿಸಿ ಇಲ್ಲವೇ ಪವಿತ್ರ ವಸ್ತುವನ್ನು ಆಹ್ವಾನಿಸಿ ತನ್ನ ಮಾತಿನಲ್ಲಿಯ ಸತ್ಯತೆಯನ್ನು ಮತ್ತು ದೃಢತೆಯನ್ನು ಪರೀಕ್ಷೆಗೆ ಇಡುವುದೆಂದರೆ 'ಶಪಥ'ವೆಂದು 'ಓಡ' ಎಂಬಾತನ ವ್ಯಾಖ್ಯೆಯಾಗಿದೆ. ವೆಸ್ಟರ್‌ಮಾರ್ಕ್ನು ಶಪಥದ ಬಗ್ಗೆ:

“An oath may be regarded as essentially a Conditional self- imprecation, a curse by which a person calls down upon himself Some evil in the event of what he says not being true.”೨೧

——————

೧೯. ಭಾರತೀಯ ಸಂಸ್ಕೃತಿಕೋಶ, ಖಂಡ ೯, ಪು.೨೧೫.
೨೦. ಉತ್ತರಕಾಂಡ, ೪೭/೯.
೨೧. Encyclopaedia of Religion and Ethics.