ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೪೭


            ಮುನೀನಾಮನ್ಯಥಾ ಕರ್ತುಂ ಸತ್ಯಮಿಷ್ಟಂ ಹಿ ಮೇ ಸದಾ |
            ಅಪ್ಯಹಂ ಜೀವಿತು ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ ||೧೮||
            ನ ತು ಪ್ರತಿಜ್ಞಾಂ ಸಂಶ್ರುತ್ಯ ಬ್ರಾಹ್ಮಣೇಭ್ಯೋ ವಿಶೇಷತಃ ||೧೯||

“ಸೀತೆಯೇ, (ಋಷಿಗಳ) ಈ ಭಾಷಣವನ್ನು ಕೇಳಿದ ನಂತರ ದಂಡಕಾರಣ್ಯದಲ್ಲಿ ಎಲ್ಲ ಬಗೆಯಿಂದಲೂ ಅವರ ರಕ್ಷಣೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡುವ ಪ್ರತಿಜ್ಞೆಯನ್ನು ನಾನು ಮಾಡಿದ್ದೇನೆ. ಒಮ್ಮೆ ಮುನಿಗಳ ಮುಂದೆ ಮಾಡಿದ ಪ್ರತಿಜ್ಞೆಯನ್ನು ನಾನು ನನ್ನ ಪ್ರಾಣವಿರುವ ಕೊನೆಯ ಗಳಿಗೆಯವರೆಗೂ ಕಡೆಗಣಿಸಲಾರನು. ಸತ್ಯವು ನನಗೆ ಸದಾ ಅತಿಪ್ರಿಯವಾದುದು. ಹೇ ಸೀತೆ! ನಾನು ನನ್ನ ಪ್ರಾಣವನ್ನು ಅಥವಾ ಲಕ್ಷ್ಮಣನ ಸಹಿತವಾಗಿ ನಿನ್ನನ್ನು ತ್ಯಜಿಸಬಹುದು; ಆದರೆ ಮಾಡಿದ ಪ್ರತಿಜ್ಞೆಯನ್ನು ಅದರಲ್ಲೂ ಬ್ರಾಹ್ಮಣರಿಗಾಗಿ ಮಾಡಿದ ಪ್ರತಿಜ್ಞೆಯನ್ನು ಪರಿವರ್ತಿಸಲಾರೆ!"೩೧

ಅಸತ್ಯವಾದ ಶಪಥವನ್ನು ಮಾಡುವುದು ಅನುಚಿತ; ಹೀಗಿದ್ದರೂ ಹಸುವಿನ ಆಹಾರ, ಮದುವೆ, ಬ್ರಾಹ್ಮಣರ ರಕ್ಷಣೆ, ಪ್ರೇಯಸಿಯೊಡನೆಯ ಸರಸಸಲ್ಲಾಪ ಈ ಪ್ರಸಂಗಗಳಲ್ಲಿ ಅಸತ್ಯಶಪಥ ಮಾಡಿದರೂ ಅದು ದೋಷಾರ್ಹವಾಗುವುದಿಲ್ಲ. ಅಲ್ಪ ಸ್ವಲ್ಪ ಕಾರಣಗಳಿಗಾಗಿ ಶಪಥ ಮಾಡುವುದು ನಿಷೇಧವೆಂದಿದೆ. ಶಪಥ ಮಾಡುವುದಕ್ಕೆ ಇಲ್ಲವೇ ಶಪಥದಿಂದ ದೂರವಿರಲು ಕೆಲವು ಸಂಕೇತಗಳಿವೆ. ಸಾಮಾನ್ಯವಾಗಿ ಚಾರಿತ್ರ್ಯದ ಅಥವಾ ಪಾತಿವ್ರತ್ಯದ ಮನವರಿಕೆ ಮಾಡಿಕೊಡಲು, ಆಪತ್ಕಾಲದಲ್ಲಿ ಅವಮಾನದ ಸೇಡನ್ನು ತೀರಿಸಲೆಂದು, ಮಿತ್ರತ್ವವನ್ನು ಪಡೆಯಲು, ರಹಸ್ಯಗಳನ್ನು ಕಾಯ್ದಿಡಲು, ಶೀಲರಕ್ಷಣೆಗೆಂದು, ಪಟ್ಟಾಭಿಷೇಕ ಸಮಯದಲ್ಲಿ ಶಪಥಗಳನ್ನು ನುಡಿಯುತ್ತಿದ್ದರು. ರಾಮಾಯಣ- ಮಹಾಭಾರತದಂಥ ಗ್ರಂಥಗಳಲ್ಲಿ ಶಾಪಗಳ ನಿರ್ದೇಶವಿರುವಂತೆ ಶಪಥಗಳ ಉಲ್ಲೇಖವೂ ಇದೆ. ರಾಮಾಯಣದಲ್ಲಿಯ ಗಣ್ಯರೆಲ್ಲರೂ ಕಾರಣಾಂತರಗಳಿಂದ ಶಪಥ ಮಾಡಿದ್ದಾರೆ.

ಶಾಪ ಮತ್ತು ಶಪಥಗಳು ಅಭಿಚಾರಾತ್ಮಕವಿರುವುದರಿಂದ, ಅವುಗಳಲ್ಲಿ ಯಾತು ಕ್ರಿಯೆಯ ವೈಶಿಷ್ಟ್ಯಗಳು ಕಂಡುಬರುತ್ತವೆ. ಕೆಲವೊಮ್ಮೆ ಈ ಎರಡೂ ಶಬ್ದಗಳನ್ನು ಸಮಾನಾರ್ಥದಲ್ಲಿ ಬಳಸಿದರೂ, ಅವು ಸರಿಸಮಾನವಿರದೇ ಅವುಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. “ಶಪಥದಲ್ಲಿ ಹೊಣೆ ದ್ಯೋತಕವಾಗಿದ್ದರೆ ಶಾಪದಲ್ಲಿ

——————
೩೧. ಅರಣ್ಯಕಾಂಡ, ೧೦.