ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೪೯

ಸಾಕ್ಷಿಯಾಗಿಡುವ ಪದ್ಧತಿ ಇತ್ತೆಂದೆನಿಸುತ್ತದೆ. ಜಲದಿವ್ಯದ ರೂಢೀಯು ಇದರಿಂದಲೇ ಬಂದಿರಬಹುದು. ಜಲದಿವ್ಯದಲ್ಲಿ, ಜಲದ ಸ್ವಾಮಿಯಾದ ವರುಣನನ್ನು ಪ್ರಾರ್ಥಿಸಬೇಕು. ವ್ರತವನ್ನು ಅಂಗೀಕರಿಸಿದ 'ಋತ'ವನ್ನು ನೀರಿನಲ್ಲಿರುವ ವರುಣನು ರಕ್ಷಿಸುತ್ತಾನೆ. ಸತ್ಯರಕ್ಷಕ, ಜಲನಿವಾಸಿಯಾದ ವರುಣನು ಶಪಥದೇವತೆಯಾಗಿದ್ದಾನೆ. ನೀರಿಗೆ ಸಾಕ್ಷಿ ಇಟ್ಟು ಶಪಥ ಮಾಡುವ ರೂಢಿ ಬಹು ಪ್ರಾಚೀನವಾಗಿದೆ. ಯಜ್ಞ ವಿಧಿಯಲ್ಲಿ ಜಲಾಶಯದ ಸಾನ್ನಿಧ್ಯದಲ್ಲಿ ಶಪಥ ಮಾಡುತ್ತಾರೆ. ವರುಣನ ವಾಸವು ನೀರಿನಲ್ಲಿದ್ದು ಅಸತ್ಯ ನುಡಿಯುವವನನ್ನು ಅಥವಾ ಸುಳ್ಳು ಶಪಥ ಮಾಡುವವನನ್ನು ನೀರಿನಿಂದ ಅಂದರೆ, ಸ್ವಸ್ಥಾನದಿಂದ ಹೊರಗಟ್ಟುತ್ತಾನೆ. ದಿವ್ಯವನ್ನು ಆಚರಿಸುವ ವ್ಯಕ್ತಿಗೆ ನೀರಿನಲ್ಲಿ ಅಂದರೆ ಸ್ವಸ್ಥಾನದಲ್ಲಿ ವರುಣನು ಇರಗೊಟ್ಟರೆ ಆ ವ್ಯಕ್ತಿಯು ನಿರ್ದೋಷಿಯೆಂದು ಸಾರಿದ ಹಾಗೆಂದು ಬಗೆಯುತ್ತಿದ್ದರು. ಸತ್ಯಕ್ರಿಯೆಯು ಅಗ್ನಿದಿವ್ಯಕ್ಕೆ ನಿಕಟವಾಗಿದೆ; ಅದರಂತೆ ಜಲದಿವ್ಯಕ್ಕೂ ನಿಕಟವಿದೆ. 'ದಿವ್ಯ' ಮಾಡುವುದು ಸತ್ಯಕ್ರಿಯೆಯ ವಿಧಿಯಾಗುವುದರಿಂದ ಈ ರೀತಿಯ ಸಂಬಂಧವಿರುವುದು ಸಹಜವಾಗಿದೆ. ಸತ್ಯಕ್ರಿಯೆಯ ಸಂಬಂಧವು 'ದಿವ್ಯ'ದೊಡನೆ ಹೆಚ್ಚಿನ ಪ್ರಮಾಣದಲ್ಲಿರಬೇಕು. 'ದಿವ್ಯ'ವೆಂದರೆ ಒಂದು ಬಗೆಯ ದೈವೀ ಪರೀಕ್ಷೆ. ಈ ಪರೀಕ್ಷೆಯಲ್ಲಿ ಉತ್ತೀರ್ಣ ನಾಗುವವನು. ಅಪರಾಧವಿಲ್ಲದ, ದೋಷವಿಲ್ಲದ, ಪಾಪರಹಿತ ವ್ಯಕ್ತಿಯೆಂದೆನಿಸುತ್ತಾನೆ. ಸತ್ಯಕ್ರಿಯೆ ಸಂಬಂಧವು ಸತ್ಯದಲ್ಲಿಯ ಅಸಾಧಾರಣ ಸಾಮರ್ಥ್ಯದ ಬಗ್ಗೆ ಇದ್ದ ಶ್ರದ್ಧೆ ಎಂದರೆ, ಸತ್ಯನಿಷ್ಠೆ. ಎಂತಿದ್ದರೂ ವಾಙ್ಮದಲ್ಲಿ ಸತ್ಯ ಕ್ರಿಯೆಯೆಂದರೆ ಒಂದು ಕಲ್ಪನಾಬಂಧ (motif) ಎಂದು ಬಳಸಿದ್ದಾರೆ. ಶಪಥವೆಂದರೆ ಕೇವಲ ಉದ್ಗಾರ; ಸತ್ಯಕ್ರಿಯೆಯೆಂದರೆ ಉಚ್ಚಾರದೊಡನೆ ಕೃತಿಯೂ ಇರುತ್ತದೆ!

ಸತ್ಯಕ್ರಿಯೆಯನ್ನಾಚರಿಸುವ ಪ್ರಸಂಗಗಳು ಸೀತೆಯ ಜೀವನದಲ್ಲಿ ಎರಡು- ಮೂರು ಬಾರಿ ಬಂದಿವೆ. ಲವ-ಕುಶರು ಹಾಡಿದ 'ರಾಮಕಥೆ'ಯನ್ನು ಕೇಳಿ ಆನಂದದಿಂದ ಮೈಮರೆತ ರಾಮನು ವಾಲ್ಮೀಕಿ ಮುನಿಗಳಿಗೆ ದೂತರ ಕೈಯಲ್ಲಿ ಹೇಳಿ ಕಳಿಸಿದನು: “ಸೀತೆಯ ಆಚರಣೆಯು ಸ್ವಾಭಾವಿಕವಾಗಿ ಶುದ್ಧವಾಗಿದ್ದರೆ ಇಲ್ಲವೇ ಆಶ್ರಮ ವಾಸದಿಂದ ಅವಳು ಶಪಥ ಮಾಡಲಿ!”


           ಶ್ವ: ಪ್ರಭಾತೇ ತು ಶಪಥಂ ಮೈಥಿಲೀ ಜನಕಾತ್ಮಚಾ |
           ಕರೋತು ಪರಿಷನ್ಮಧ್ಯೇ ಶೋಧನಾರ್ಥಂ ಮಮೈವ ಚ ||೬||