ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೫೫


ಇರುತ್ತಿತ್ತು. ತಪಸ್ಸಿನಂತೆಯೇ ಯಜ್ಞಯಾಗ, ಪೂಜೆಪುನಸ್ಕಾರ ಇವೆಲ್ಲವುಗಳಿಂದಲೂ
ಇಷ್ಟಾರ್ಥದ ಪ್ರಯತ್ನಗಳು ನಡೆಯುತ್ತಿದ್ದವು. ಈ ಬಗೆಯಿಂದ ಪಡೆದ ವರಗಳು
ಬಹಳಷ್ಟು ಯಾಚಿತ ವರಗಳಾಗಿರುತ್ತಿದ್ದವು. ರಾಮಾಯಣದಲ್ಲಿಯ ಒಟ್ಟು
ಎಂಬತ್ನಾಲ್ಕು ವರಗಳಲ್ಲಿ ಹದಿನೈದು ವರಗಳು, ತಪಸ್ಸು-ಯಜ್ಞಯಾಗಗಳಿಂದ
ದೊರೆತಿವೆ. ಇವುಗಳನ್ನು ಹೆಚ್ಚಾಗಿ ಪಡೆದವರು ರಾಕ್ಷಸರು. ರಾವಣ, ಇಂದ್ರಜಿತು,
ಕುಂಭಕರ್ಣ, ವಿಭೀಷಣ, ಮಾರೀಚ, ಸುಮಾಲಿ, ಮಾಲ್ಯವಾನ್ ಮೊದಲಾದ
ರಾಕ್ಷಸರು ಕಠೋರ ತಪಸ್ಸನ್ನು ಆಚರಿಸಿ ವರಗಳನ್ನು ಪಡೆದಿದ್ದಾರೆ. ವಿರಾಧ,
ದುಂದುಭಿ ಇವರು ಸಹ ತಪಶ್ಚರ್ಯೆ ಮಾಡಿದ್ದರು. ರಾಕ್ಷಸರು ತಪಮಾಡಿದಂತೆ,
ವಸಿಷ್ಠ ವಿಶ್ವಾಮಿತ್ರ, ಪರಭಂಗ ಕಶ್ಯಪಾದಿ ಮುನಿವರ್ಯರುಗಳು ತಪವನ್ನಾಚರಿಸಿ
ತಮಗೆ ಬೇಕಾದುದನ್ನು ಪಡೆದಿದ್ದಾರೆ. ಪಿತೃಗಳಿಗೆ ಸ್ವರ್ಗಪ್ರಾಪ್ತಿಯಾಗಲೆಂದು
ಭಗೀರಥನು ಉಗ್ರತಪವನ್ನಾಚರಿಸಿದನು. ವರ ಪಡೆಯಲೋಸುಗ ಮಾಂಧಾತನು
ತಪವನ್ನು ಕೈಕೊಂಡಿರಬೇಕು. ತಪ ಮಾಡಿದ ನಂತರವೂ ವರಪ್ರಾಪ್ತಿಯಾಗದ
ಒಂದೇ ಒಂದು ಉದಾಹರಣೆ ಎಂದರೆ ಶಂಬೂಕನದು. ಯಜ್ಞದಿಂದ
ದೇಹಸಹಿತವಾಗಿ ಸ್ವರ್ಗವನ್ನು ಸೇರುವ ತ್ರಿಶಂಕುವಿನ ಆಕಾಂಕ್ಷೆ ವಿಫಲಗೊಂಡಿತು.
ಪುತ್ರಕಾಮೇಷ್ಠಿ ಯಜ್ಞದ ಫಲವಾಗಿ ಪಾಯಸವು ದೊರೆಯಿತು; ಅದರಿಂದ
ಮಕ್ಕಳು ಜನಿಸಿದರು. ಹೀಗಿದ್ದರೂ 'ಪಾಯಸಪ್ರಾಪ್ತಿ' ಎಂದರೆ ವರವಲ್ಲ; ಅದು
ಅನುಗ್ರಹವಾಗಿದೆ. ಇದರ ಚರ್ಚೆಯನ್ನು ಸವಿಸ್ತಾರವಾಗಿ ಬೇರೆಡೆಯಲ್ಲಿ
ಕೊಡಲಾಗಿದೆ.೪೧ ಏಳು ಯಜ್ಞಗಳನ್ನು ನೆರವೇರಿಸಿ ಇಂದ್ರಜಿತು ಮರ್ಯಾದಿತವಾದ
ಅಮರತ್ವವನ್ನು ಪಡೆದುಕೊಂಡನು. ಇದು ಆತನ ಯಾಚಿತ ವರವಾಗಿತ್ತು. ದೇಹವು
ಅಚೇತನಗೊಂಡಿದ್ದರೂ ನಿಮಿರಾಜನ ಅಂತರಾತ್ಮಕ್ಕೆ ವರ ದೊರಕಿದೆ; ಏಕೆಂದರೆ
ಆತನು ಪ್ರಾರಂಭಿಸಿದ್ದ ಯಾಗವನ್ನು ಬೇರೆ ಋಷಿಗಳು ನಿಮಿರಾಜನ
ಮರಣಾನಂತರವೂ ಮುಂದುವರಿಸಿದ್ದರು. ಈ ರೀತಿ ದೊರೆತ ಈ ವರವು
'ಅಯಾಚಿತ'ವಿದೆ.
ಸುಕೇತು, ಸಗರ, ದಿತಿ, ಕಾಲಿಂದಿ ಇವರೆಲ್ಲರೂ ಅಪತ್ಯಪ್ರಾಪ್ತಿಗಾಗಿ ತಪವನ್ನಾ
ಚರಿಸಿದರು. ದಿತಿಗೆ ಯಶ ಲಭಿಸಲಿಲ್ಲ; ಮಿಕ್ಕವರಿಗೆಲ್ಲ ಫಲಪ್ರಾಪ್ತಿಯಾಯಿತು. ದಿತಿಗೆ
ದೊರೆತ ವರವು ಕಟ್ಟಳೆಯ ವರವಾಗಿತ್ತು. ಆ ಬಂಧನದ ಪಾಲನೆ ಅವಳಿಂದಾಗಲಿಲ್ಲ.
ಈ ಎಲ್ಲ ವರಗಳು ಯಾಚಿತ ವರಗಳಾಗಿವೆ. ಬಯಕೆಯನ್ನು ಪೂರೈಸಲು
——————
೪೧. ಪರಿಶಿಷ್ಟ ೧, ಪಾಯಸಪ್ರಾಪ್ತಿ.