ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೫೭

ಮೊಟ್ಟಮೊದಲಿಗೆ ತಂದ ಮಂಥರೆಗೆ, ಕೈಕೇಯಿಯು ವರವನ್ನು ಕೊಡಬಯಸಿದ್ದಳು. ಮಂಥರೆಯು ಅದನ್ನು ಸ್ವೀಕರಿಸಲಿಲ್ಲವೆಂಬ ಸಂಗತಿ ಬೇರೆಯೇ ಇದೆ. 'ಸೋಮದಾ' ಮತ್ತು 'ಶಬರಿ' ಇವರು ಸಲ್ಲಿಸಿದ್ದ ಉತ್ಕೃಷ್ಟ ಸೇವೆಯ ಫಲವು ಅವರಿಗೆ ಪ್ರಾಪ್ತವಾಯಿತು. ಸೋಮದೆಯು ಯಾರೊಬ್ಬರ ಪತ್ನಿಯಾಗದೇ ವರದಿಮದ ಪುತ್ರನನ್ನು ಪಡೆದಳು. ತೃಣಬಿಂದು ಕನ್ಯೆಗೆ ಪುಲಸ್ತ್ಯನಿಂದ ಶಾಪ ದೊರೆತರೂ ಪರಿಣಾಮದಲ್ಲಿ ಅದು ಅವಳ ಪಾಲಿಗೆ ವರವಾಗಿ ಪರಿಣಮಿಸಿತು. ಅವಳು ಪುಲಸ್ತ್ಯನ ಹೆಂಡತಿಯಾದಳು. ನಿಃಸ್ವಾರ್ಥಸೇವೆಯು ಸ್ತ್ರೀಧರ್ಮವಾಗಿರು ವುದರಿಂದ, ಉತ್ಕೃಷ್ಟಸೇವೆಯ ಫಲವು ಅವರಿಗೆ ಹೆಚ್ಚಾಗಿ ಲಭಿಸುವುದು ಸಹಜವಾಗಿದೆ. ಹನುಮಂತನೊಬ್ಬನನ್ನುಳಿದು ಲಕ್ಷ್ಮಣನಷ್ಟು ಉತ್ಕೃಷ್ಟ ಸೇವೆಯನ್ನು ಬೇರೆ ಯಾರೂ ಮಾಡಿದ ಉಲ್ಲೇಖ ರಾಮಾಯಣದಲ್ಲಿಲ್ಲ. ಹೀಗಿದ್ದರೂ ಲಕ್ಷ್ಮಣನಿಗೆ ಒಂದು ವರ ಕೂಡ ಲಭಿಸಿಲ್ಲವೆಂಬುದು ವಿಸ್ಮಯಕಾರಕವಾಗಿದೆ.

ವಾಲ್ಮೀಕಿ ರಾಮಾಯಣದಲ್ಲಿ ಅದೆಷ್ಟೋ ವರಗಳ ಹಿನ್ನೆಲೆಯು ಸ್ಪಷ್ಟವಾಗಲಿಲ್ಲ.

ವರಗಳ ಪರಿಣಾಮಗಳು

ಮೃತ್ಯುಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೆ ಅಸಾಧ್ಯವಿರುವ ಸಂಗತಿ ಎಂದರೆ ಅಮರತ್ವ. ಇದನ್ನು ಪಡೆಯಲು ಎಷ್ಟು ಬೇಕಾದರೂ ಶಾರೀರಿಕ, ಮಾನಸಿಕ ಕ್ಲೇಶಗಳನ್ನು ಸಹಿಸುವ ಇಚ್ಛೆ ಆತನದಾಗಿರುತ್ತದೆ. ಈ ಮಣ್ಣಿನ ಬಾಳು ಕ್ಷಣಿಕವಿದೆ, ನೀರಿನ ಮೇಲಿನ ಗುಳ್ಳೆಯಂತಿದೆ ಎಂಬ ಅರಿವಿದ್ದರೂ ಆದಷ್ಟು ಹೆಚ್ಚು ಕಾಲ ಜೀವಿಸಬೇಕೆಂಬ ಹಂಬಲ, ಪ್ರಯತ್ನ ಎಡೆಬಿಡದೇ ನಡೆದಿರುತ್ತದೆ. ಈ ಮೃತ್ಯುಲೋಕದಲ್ಲಿ ಸುಖವಾಗಿ ಬಾಳಬೇಕೆಂದು ಸತತ ಯತ್ನ ನಡೆದೇ ಇರುತ್ತದೆ. ಮುಪ್ಪು ಮೃತ್ಯುವಿನ ಪೂರ್ವ ಸೂಚನೆ ಎಂಬುದನ್ನು ಶಂಕ್ರಾಚಾರ್ಯರ ಶಾಪದಿಂದ ಅರಿತ 'ಯಯಾತಿ'ಯು ತನ್ನ ಮಗನಿಂದ ತಾರುಣ್ಯವನ್ನು ಬೇಡಿಕೊಂಡು ತನ್ನ ಕಾಮಲಾಲಸೆಯನ್ನು ಪೂರೈಸಿಕೊಂಡನು. ಬದುಕಿರಬೆಕೆಂಬ ಆಸೆಯು ಅತಿ ತೀವ್ರವಾಗಿರುವುದರಿಂದ ಅಮರತ್ವವನ್ನು ಪಡೆಯಲು ತಪಸ್ಸನ್ನು ಆಶ್ರಯಿಸುತ್ತಾರೆ. ಈ ರೀತಿ ತಪಸ್ಸನ್ನು ಆಚರಿಸಿ ರಾವಣ, ಮೇಘನಾದ ಇವರು ಅಮರರಾಗಲು ಯತ್ನಿಸಿದರು. ಯಜ್ಞಯಾಗಾದಿಗಳನ್ನು ಆಚರಿಸಿದರು; ತಪಸ್ಸನ್ನು ಕೈಕೊಂಡರು. ವರಗಳನ್ನು ಪಡೆದು ಎಣೆಯಿಲ್ಲದ ತಮ್ಮ ಸಾಮರ್ಥ್ಯದಿಂದ ತಮ್ಮ ಜೀವನವನ್ನು ಇಷ್ಟಬಂದಂತೆ ಬಾಳಬೇಕೆಂದು ಈ ಎಲ್ಲ ಪ್ರಯತ್ನಗಳಿದ್ದವು. ಬೇರೆ ರಾಕ್ಷಸರು ಇದೇ ಉದ್ದೇಶವನ್ನಿಟ್ಟುಕೊಂಡು, ಯತ್ನಿಸಿ ಯಶ ಪಡೆದಿದ್ದರು.