ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಆ ವರವಾಗಿತ್ತು. ಮಧುದೈತ್ಯನ ತಪದಿಂದ ಸಂತುಷ್ಟನಾದ ರುದ್ರನು ಆತನಿಗೆ ತ್ರಿಶೂಲವನ್ನು ಕೊಟ್ಟನು. ಅದು ಕೈಯಲ್ಲಿದ್ದರೆ ಶತ್ರುವನ್ನು ಸುಟ್ಟು ಬೂದಿಮಾಡಬಲ್ಲ ಬಲವು ಉಂಟಾಗುತ್ತಿತ್ತು. ಈ ವರದ ಹಿಂದೆ ಒಂದ ಕಟ್ಟಳೆಯು ಸಹ ಇತ್ತು. ಅದೇನೆಂದರೆ, ರುದ್ರನು ರಾಕ್ಷಸನಿಗೆ “ಎಲೈ ಮಹಾ ಅಸುರನೇ! ನೀನು ಎಲ್ಲಿಯವರೆಗೆ ದೇವತೆಗಳನ್ನು ಮತ್ತು ಬ್ರಾಹ್ಮಣರನ್ನು ವಿರೋಧಿಸುವುದಿಲ್ಲವೋ ಅಲ್ಲಿಯವರೆಗೆ ಈ ತ್ರಿಶೂಲವು ನಿನ್ನ ಸಾನ್ನಿಧ್ಯದಲ್ಲಿ ಉಳಿಯುವುದು; ಅವರನ್ನು ವಿರೋಧಿಸಿದೊಡನೆ ಅದು ಇಲ್ಲವಾಗುವುದು” ಎಂದು ಹೇಳಿದನು. ಆಗ ಮಧುದೈತ್ಯನು ಬಿನ್ನವಿಸಿದ ಕಾರಣ ರುದ್ರನು “ಈ ತ್ರಿಶೂಲವು ನಿನ್ನ ತರುವಾಯ ನಿನ್ನ ಒಬ್ಬ ಮಗನ ಬಳಿ ಉಳಿಯುವುದು” ಎಂಬ ಆಶ್ವಾಸನೆಯನ್ನಿತ್ತನು. ಈ ರೀತಿ ಲವಣನಿಗೆ ತ್ರಿಶೂಲವು ದೊರಕಿತು. ಅದನ್ನು ಆತನು ಋಷಿಗಳ ವಿರುದ್ಧ ಬಳಸಲಾರಂಭಿಸಿದನು. ನಂತರ ಋಷಿಗಳು ಪ್ರಾರ್ಥಿಸಿದ್ದರಿಂದ ರಾಮನು ಶತ್ರುಘ್ನನಿಂದ ಲವಣನನ್ನು ಕೊಲ್ಲಿಸಿದನು (ಉತ್ತರಕಾಂಡ, ೭೭).

ಸಾನುಗ್ರಹ ವರಗಳು

ಅನುಗ್ರಹ ಇದು ವರಗಳಲ್ಲಿಯ ಒಂದು ಪ್ರಕಾರವಾಗಿದೆ. ಅನುಗ್ರಹಿಸಿಕೊಟ್ಟ ವರಕ್ಕೆ ಸಾನುಗ್ರಹ ವರವೆನ್ನುತ್ತಾರೆ. ಅನುಗ್ರಹ ಹೊಂದಲು ಇಲ್ಲವೇ ವರ ಪಡೆಯಲು ಯಾವುದಾದರೊಂದು ಸಾಧನೆಯನ್ನು ಮಾಡಬೇಕಾಗುತ್ತದೆ. ಇನ್ನೊಬ್ಬರ ಒಳಿತನ್ನು ಮಾಡುವ ಇಚ್ಛೆಯು ಇದರಲ್ಲಿ ಅಡಕವಾಗಿರಬೇಕು. ಇವೆರಡರಲ್ಲಿ ಒಂದು ಸೂಕ್ಷ್ಮ ಭೇದವಿದೆ. ವರವೆಂಬುದು ಕೇವಲ ವಾಕ್-ಶಕ್ತಿ, ಸದಿಚ್ಛೆಯನ್ನು ವ್ಯಕ್ತಮಾಡಲು ಇದ್ದ ಒಂದೇ ಮಾರ್ಗವೆಂದರೆ ಶಬ್ದೋಚಾರ. ಕಾರಣ ಅದು ಅಮೂರ್ತವಾಗಿದೆ. ಅನುಗ್ರಹದಲ್ಲಿ ಕೊಡಲ್ಪಡುವ ವಸ್ತುಗಳಿರು ವುದರಿಂದ ಅದಕ್ಕೆ ಮೂರ್ತಸ್ವರೂಪವು ಬರುತ್ತದೆ; ಶಬ್ದೋಚ್ಚಾರವಷ್ಟೇ ಅನುಗ್ರಹದಲ್ಲಿ ಇರುವುದಿಲ್ಲ. ಸದಿಚ್ಛೆಯನ್ನು ಕೊಡುತಗೊಳ್ಳುವ ವಸ್ತುಗಳಿಂದ ವ್ಯಕ್ತಮಾಡಬಹುದು. ವರಗಳ ಪರಿಣಾಮವು ತದನಂತರ ಕಂಡುಬರುವುದು; ಆದರೆ, ಅನುಗ್ರಹದಲ್ಲಿ ಶಬ್ದೋಚ್ಚಾರ ದೊಡನೆಯೇ ವಸ್ತುವನ್ನೂ ಕೊಡಲಾಗುತ್ತದೆ. ಅನುಗ್ರಹ ಮತ್ತು ವರ ಇವೆರಡರಲ್ಲಿಯ ಭೇದವನ್ನು ಸ್ವಲ್ಪದರಲ್ಲಿ ಹೇಳುವುದೆಂದರೆ ದೃಷ್ಟದಾನಂ ಅನುಗ್ರಹಃ | ಅದೃಷ್ಟದಾನಂ ವರಃ | ಅನುಗ್ರಹವೆಂದರೆ ಕೃಪಾಪ್ರಸಾದ. ಅಭೀಷ್ಟ ಸಂಪಾದನೇಚ್ಛಾರೂಪಃ ಪ್ರಸಾದಃ| ಭಗವಂತನ ಕೃಪೆಯಿಂದ ಅಥವಾ ಪ್ರಸಾದದಿಂದ ತಮಗೆ ಬೇಕಿದ್ದ ವಸ್ತುವು ಲಭಿಸುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಅನುಗ್ರಹದ ಮಹಿಮೆಯನ್ನು ವಿವರಿಸಿದ್ದಾನೆ: