ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೬೩

ಮತ್ ಪ್ರಸಾದಾದವಾಪ್ನೋತಿ ಶಾಶ್ವತಃ ಪದಮವ್ಯಯಂ | ಭಗವತ್ಪರಾಯಣನಾದ ಕರ್ಮಯೋಗಿಯು ನನ್ನ ಕೃಪಾಪ್ರಸಾದದಿಂದ ಶಾಶ್ವತರೂಪವನ್ನು ಪಡೆದುಕೊಳ್ಳುತ್ತಾನೆ.೪೫

ವಾಲ್ಮೀಕಿರಾಮಾಯಣದಲ್ಲಿ ಸಾನುಗ್ರಹ ವರದ ಉದಾಹರಣೆಗಳು ಸಾಕಷ್ಟಿವೆ. ಅನಸೂಯೆಯು ಸೀತೆಗೆ ವರವನ್ನು ಬೇಡಿಕೊಳ್ಳಲು ಹೇಳಿದಾಗ ಅವಳು ವಿನಯದಿಂದ ಅದನ್ನು ನಿರಾಕರಿಸಿದಳು. ಆಗ ಅನಸೂಯೆಯು ಸೀತೆಗೆ ದಿವ್ಯಮಾಲೆ, ವಸ್ತ್ರ, ಆಭೂಷಣ, ಉರುಟಣೆ ಮತ್ತು ಅಮೂಲ್ಯವಾದ ಲೇಪನದ್ರವ್ಯಗಳನ್ನು ಕೊಟ್ಟಳು. ಈ ರೀತಿ ವರ ಮತ್ತು ಅನುಗ್ರಹಗಳಲ್ಲಿಯ ಭೇದವು ಸ್ಪಷ್ಟವಾಗಿದೆ. ಬ್ರಹ್ಮದೇವನ ಹೇಳಿಕೆಯಿಂದ ಅಶೋಕವನದಲ್ಲಿದ್ದ ಸೀತೆಗೆ ಇಂದ್ರನು ಕೊಟ್ಟ ಹವಿಷ್ಯಾನ್ನವು, ಸಂಪಾತಿಗೆ ನಿಶಾಕರಮುನಿಯಿಂದ ಪುನಃ ಪ್ರಾಪ್ತಿಯಾದ ರೆಕ್ಕೆಗಳು, ಮೇಘನಾದನಿಗೆ ಲಭಿಸಿದ ದಿವ್ಯ ರಥವು, ಧನುರ್ಬಾಣಗಳು, ಶಸ್ತ್ರಗಳು, ಇದಲ್ಲದೆ ತಾಮಸ ಮಾಯಾಬಲವು, ರಾವಣನ ಜೊತೆಯ ಕಾಳಗದಲ್ಲಿ ರಾಮನಿಗೆ ಇಂದ್ರನಿಂದ ದೊರಕಿದ ಸಾರಥಿಯಿದ್ದ ರಥವು, ಪ್ರಚಂಡ ಧನುಸ್ಸು, ಕಣ್ಣು ಕುಕ್ಕುವ ಕವಚ, ಹೊಳಪುಳ್ಳ ಬಾಣಗಳು, ನಿರ್ಮಲಶಕ್ತಿ, ಬ್ರಹ್ಮದೇವನು ಕುಬೇರನಿಗೆ ದಯಪಾಲಿಸಿದ ಲೋಕಪಾಲಪದವು, ಕೋಶಾಧ್ಯಕ್ಷತೆಯು, ಶಂಕರನು ರಾವಣನಿಗೆ ಕೊಟ್ಟ ಚಂದ್ರಹಾಸ ಖಡ್ಗ, ಮೇಘನಾದನಿಗೆ ದೊರೆತ ಅಂತರಿಕ್ಷದಲ್ಲಿ ಸಂಚರಿಸುವ ಇಚ್ಛಾಗಮನಿ ರಥ, ಎಂದಿಗೂ ಕಡಿಮೆಯಾಗಲಾರದ ಬಾಣ ತುಂಬಿದ ಬತ್ತಳಿಕೆ, ಒಂದು ಪ್ರಚಂಡ ಅಸ್ತ್ರ, ಹಾಗೂ ರುದ್ರನಿಂದ ಮಧುದೈತ್ಯನಿಗೆ ಕ್ರಮೇಣ ಲವಣನಿಗೆ ಪ್ರಾಪ್ತವಾದ ಶೂಲ, ಇವೆಲ್ಲವೂ ಸಾನುಗ್ರಹ ವರಗಳ ಉದಾಹರಣೆಗಳಾಗಿವೆ. ಅನುಗ್ರಹದಲ್ಲಿ ವರವಿದ್ದೇ ಇರುತ್ತದೆ. ಅದು ಮೂರ್ತಸ್ವರೂಪವಾಗಿರುತ್ತದೆ. ವರದಲ್ಲಿ ಅನುಗ್ರಹವಿದ್ದೇ ಇರುತ್ತದೆಂದು ಹೇಳಲಾಗುವುದಿಲ್ಲ. ಹಾಗೆ ಇದ್ದರೆ, ಅದು ಸಾನುಗ್ರಹ ವರವೆನ್ನಿಸುತ್ತದೆ.

ಆಶೀರ್ವಾದ-ಸದಿಚ್ಛೆ

ವರ, ಆಶೀರ್ವಾದ, ಸದಿಚ್ಛೆ ಇವುಗಳು ಸದ್ಭಾವನೆ, ಸಂತುಷ್ಟತೆಗಳಿಂದ ಮೂಡಿಬರುತ್ತವೆ. ಯಾರೊಬ್ಬರಿಗೆ ವರ ಕೊಡುವುದಿರಲಿ, ಆಶೀರ್ವದಿಸುವದಿರಲಿ ಇಲ್ಲವೇ ಸದಿಚ್ಛೆ ಪ್ರಕಟಿಸುವುದಿರಲಿ, ಅವರ ಬಗ್ಗೆ ಪ್ರೀತಿ, ಅನುಕಂಪ, ಆದರ,

——————
೪೫. ಭಾರತೀಯ ಸಂಸ್ಕೃತಿ ಕೋಶ, ಖಂಡ ೧, ಪು.೧೬೦ (ದ್ವಿ.ಆ.)