ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೬೭

ಕೃಪಾಪ್ರಸಾದವು ಲಭಿಸಬೇಕೆಂದು ಇಷ್ಟದೇವತೆಗೆ ಯಾವುದೊಂದು ವಸ್ತುವನ್ನು, ಕಾಣಿಕೆ-ಹರಕೆ ಎಂದು ಅರ್ಪಿಸುವುದು, ಈ ರೀತಿ ನಡೆದುಕೊಳ್ಳುವೆ ಎಂದು ವ್ರತವನ್ನು ಮಾಡುವದು, ವಿಶಿಷ್ಟ ಪ್ರಕಾರದ ಪೂಜೆಯನ್ನು ಸಲ್ಲಿಸುವುದು; ಇದೇ ಬಗೆಯ ಪ್ರತಿಜ್ಞೆ ಹರಕೆಯಲ್ಲಿರುತ್ತವೆ. ಇದರಲ್ಲಿ ನಿಯಮ-ಕಟ್ಟಳೆಗಳಿರುತ್ತವೆ. ಇಷ್ಟಾರ್ಥವು ಮನಸ್ಸಿನಂತೆ ಸಾಧ್ಯವಾದಾಗ ಈ ಹರಕೆಯಂತೆ ನಡೆದುಕೊಳ್ಳಲೇಬೇಕೆಂಬ ಬಂಧನವಿರುತ್ತದೆ. ಒಂದು ವೇಳೆ ಮನೋರಥವು ಈಡೇರದಿದ್ದರೆ ಹರಕೆ ಮಾಡಿಕೊಂಡ ವ್ಯಕ್ತಿಯು ಹರಕೆಯನ್ನು ಪೂರೈಸಬೇಕೆಂತಿಲ್ಲ. ಇಚ್ಛೆಯಂತೆ ಹರಕೆಯ ಫಲವು ದೊರೆತು ಹರಕೆಯನ್ನು ದೇವತೆಗೆ ಒಪ್ಪಿಸದಿದ್ದರೆ ಆ ದೇವತೆಯು ಕೋಪಗೊಂಡು ತಮಗೆ ಕೇಡನ್ನುಂಟುಮಾಡಬಹುದೆಂಬ ತಿಳುವಳಿಕೆ ಇದೆ. ವರ ದೊರೆಯಲು ತಪಸ್ಸು, ಯಜ್ಞ ಇತ್ಯಾದಿಗಳ ಸಾಧನೆ ಬೇಕು; ಆ ದೃಷ್ಟಿಯಲ್ಲಿ ಹರಕೆಯ ರೂಪವು ಸೌಮ್ಯವಾಗಿದೆ. ಹರಕೆ ಶುದ್ಧ ಲೇವಾ-ದೇವಿ ಕೊಡ-ತಕ್ಕೊಳ್ಳುವ ವ್ಯವಹಾರ, ಇಚ್ಛಾಪೂರ್ತಿಯಾದಾಗ ಹರಕೆ ಈಡೇರಿತು ಎಂದು ಹೇಳುತ್ತಾರೆ. ಹರಕೆಯಲ್ಲಿ ಕಟ್ಟಲೆಗಳಿವೆ. ಯಾಚಿತ ವರ ಮತ್ತು ಹರಕೆಯಲ್ಲಿ ಒಂದು ಭೇದವಿದೆ. ವರ ದೊರೆಯಲು ಮೊದಲು ಪ್ರಯತ್ನ ಬೇಕು; ಹರಕೆಯಲ್ಲಿ ಫಲ ಮೊದಲು; ನಂತರ ಹರಕೆ-ಕಾಣಿಕೆಯನ್ನು ಒಪ್ಪಿಸಬೇಕು. ಇಷ್ಟಾರ್ಥ ಫಲಿಸದಿದ್ದರೆ, ಹರಕೆ ಪೂರೈಸುವ ಪ್ರಶ್ನೆ ಬರುವುದಿಲ್ಲ. ಸತ್ಯನಾರಾಯಣನ ಪೂಜೆಯನ್ನು ಮಾಡುವುದು; ಅಮ್ಮನವರಿಗೆ ಉಡಿ ತುಂಬಿಸುವುದು; ಪೂಜೆಯನ್ನು ಸಲ್ಲಿಸುವುದು; ತುಲಾಭಾರ ಮಾಡುವುದು; ಉಪವಾಸವಿರುವುದು; ವ್ರತಗಳನ್ನು ಆಚರಿಸುವುದು; ಕಾಣಿಕೆಗಳನ್ನು ಅರ್ಪಿಸುವುದು; ಇವು ವಿವಿಧ ರೀತಿಯ ಹರಕೆಗಳಾಗಿವೆ. ಹರಕೆಗಳನ್ನು ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿ ಬೇಡಿಕೊಳ್ಳುತ್ತಾರೆ.

ವಾಲ್ಮೀಕಿ ರಾಮಾಯಣದಲ್ಲಿ ಹರಕೆಯ ಎರಡು ಉದಾಹರಣೆಗಳಿವೆ. ಈ ಎರಡು ಹರಕೆಗಳು ಸೀತೆಯಿಂದಲೇ ನಡೆದಿವೆ. ದಂಡಕಾರಣ್ಯದತ್ತ ಹೋಗುವಾಗ ಗಂಗಾ ಮತ್ತು ಯಮುನಾ ನದಿಗಳನ್ನು ದಾಟಿಹೋಗಬೇಕಿತ್ತು. ಆಗ ಸಿತೆಯು ಈ ನದಿಗಳಿಗೆ ಹರಕೆ ಮಾಡಿಕೊಂಡಳು. ಈ ಎರಡು ಹರಕೆಗಳಲ್ಲಿಯ ಆಶಯವು ಒಂದೇ ಆಗಿತ್ತು. "ಪ್ರಯಾಣ ಸುಖಕರವಾಗಬೇಕು; ಅರಣ್ಯವಾಸವು ನೆಮ್ಮದಿಯಾಗಿರಬೇಕು; ಮತ್ತು ರಾಮನು ಅಯೋಧ್ಯೆಗೆ ಸುಖವಾಗಿ ಮರಳಬೇಕು” ಎಂದಿತ್ತು. ಗಂಗೆಯು ಯಮುನೆಗಿಂತ ದೊಡ್ಡವಳು, ಹೆಚ್ಚು ಪವಿತ್ರಳೆಂದು ಹರಕೆಯ ಕಾಣಿಕೆಗಳಲ್ಲಿ ಸಮಾನತೆ ಇಲ್ಲ; ತಾರತಮ್ಯವಿದೆ. ಗಂಗೆಯನ್ನು ಸಂತೋಷಿಸಲು