ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೭೩

ಘಟಕಗಳಾಗಿವೆ. ಶಾಪ-ವರಗಳನ್ನು ಗಮನಿಸಿದಾಗ, ರಾಮಾಯಣವು ಒಂದು ಶಾಪಕಥೆ-ವರಕಥೆ ಎಂದರು ಅತಿಶಯೋಕ್ತಿ ಎನಿಸಲಾರದು.

ರಾಮಾಯಣ: ಶಾಪಕಥೆ-ವರಕಥೆ

ರಾಮಾಯಣದ ಪ್ರಾರಂಭ, ಕೊನೆ, ಅದರಲ್ಲಿ ಕಥೆಗೆ ಓಘವನ್ನೀಡುವ ಘಟನೆಗಳು, ಕತೆಯ ಆಯಾಮ- ಇವೆಲ್ಲವೂ ಶಾಪ-ವರಗಳನ್ನಾಧರಿಸಿವೆ. ಅವುಗಳ ಪ್ರಭಾವವು ವ್ಯಕ್ತಿಗಳ ಸ್ವಭಾವದಲ್ಲಿಯೂ ಮೂಡಿದೆ. ವಾಲ್ಮೀಕಿಯು ನಿಷಾದನಿಗೆ ಕೊಟ್ಟ ಶಾಪದ ಕಾರಣ ರಾಮಾಯಣ ಜನಿಸಿತು. ಬ್ರಹ್ಮದೇವನ ವರದಿಂದ ಗ್ರಂಥದ ರಚನೆಯಾಯಿತು; ಬರೆಯುವುದಕ್ಕೆ ಪ್ರೋತ್ಸಾಹ ದೊರೆಯಿತು. ಭೂಮಂಡಲದಲ್ಲಿ ನದಿ-ಪರ್ವತಗಳು ವಿರಾಜಿಸುವವರೆಗೆ ರಾಮಾಯಣವು ಲೋಕ ಪ್ರಚಾರದಲ್ಲಿರುವುದು ಖಂಡಿತ! ಎಂಬ ಬ್ರಹ್ಮನ ಭವಿಷ್ಯವು ಯಥಾರ್ಥವಾಗಿದೆ. ರಾಮಾಯಣದ ಪ್ರಾರಂಭವು ಶಾಪದಿಂದ ಹೇಗೋ ಹಾಗೆಯೇ ಅದರ ಸಮಾಪ್ತಿಯೂ ಶಾಪದ ಸಂದರ್ಭದಿಂದಲೇ ಆಗಿದೆ. ರಾಮಾವತಾರದ ಕಾರ್ಯವು ಮುಗಿಯಲಿದೆ ಎಂಬ ಸಂದೇಶವನ್ನು ತಲುಪಿಸಲೆಂದು ಕಾಲಪುರುಷನು ಬ್ರಹ್ಮನ ಹೇಳಿಕೆಯಂತೆ ರಾಮನ ಬಳಿ ಬಂದಿದ್ದನು. ಏಕಾಂತದಲ್ಲಿ ಒಬ್ಬರೊಬ್ಬರು ಮಾತನಾಡುತ್ತಿದ್ದರು. ಅಲ್ಲಿ ಇನ್ಯಾರಿಗೂ ಪ್ರವೇಶಕ್ಕೆ ಅವಕಾಶವಿರಬಾರದೆಂದು ಲಕ್ಷ್ಮಣನಿಗೆ ವಿಧಿಸಲಾಗಿತ್ತು. ಈ ಆಜ್ಞೆಯನ್ನು ಉಲ್ಲಂಗಿಸಿದವನಿಗೆ ದೇಹಾಂತಶಿಕ್ಷೆ ಎಂದೂ ನಿಶ್ಚಿತವಾಗಿತ್ತು. ಇದೇ ಸಮಯದಲ್ಲಿ ದುರ್ವಾಸ ಋಷಿಯು ಅಲ್ಲಿಗೆ ಬಂದನು. ತಕ್ಷಣ ರಾಮನ ಭೇಟಿ ಮಾಡಿಸಬೇಕೆಂದು ಲಕ್ಷ್ಮಣನಿಗೆ ತಿಳಿಸಿದನು. ಲಕ್ಷ್ಮಣನು ಆಗ ಇದ್ದ ಪರಿಸ್ಥಿತಿಯನ್ನು ದುರ್ವಾಸನಿಗೆ ತಿಳಿಸಿ ಹೇಳಲು ಯತ್ನಿಸಿದನು. ಆಗ ದುರ್ವಾಸನು ಲಕ್ಷ್ಮಣನಿಗೆ- “ದುರ್ವಾಸನು ಆಗಮಿಸಿದ್ದಾನೆ ಎಂಬುದನ್ನು ನೀನು ಈ ಕ್ಷಣಕ್ಕೆ ರಾಮನಿಗೆ ತಿಳಿಸು! ನೀನು ತಿಳಿಸದೇ ಇದ್ದರೆ ನಾನು ಈ ದೇಶವನ್ನು, ಈ ಅಯೋಧ್ಯೆಯನ್ನು, ನಿನ್ನನ್ನು ಮತ್ತು ರಾಮನನ್ನು ಶಪಿಸುವೆ! ಇಷ್ಟೇ ಅಲ್ಲದೆ, ಭರತನಿಗೂ ನಂತರದ ನಿಮ್ಮ ಪೀಳಿಗೆಗೂ ಶಾಪವನ್ನು ಕೊಡುವೆ” ಎಂದನು. ಲಕ್ಷ್ಮಣನಿಗೆ ಒಂದು ಸಮಸ್ಯೆಯುಂಟಾಯಿತು. ದುರ್ವಾಸನ ಭೇಟಿಯನ್ನು ಆ ಕ್ಷಣಕ್ಕೆ ರಾಮನೊಡನೆ ಮಾಡಿಸಿಕೊಡುವುದೆಂದರೆ ರಾಮನ ಆಜ್ಞೆಯ ಉಲ್ಲಂಗನೆ; ಅದರ ಶಿಕ್ಷೆ ಎಂದರೆ ಸಾವು; ಇನ್ನು ಭೇಟಿಯಾಗದಂತೆ ಮಾಡಿದರೆ ಇಡೀ ರಘುಕುಲಕ್ಕೆ ಘೋರ ಶಾಪ! ಈ ರೀತಿ ಇಕ್ಕಟ್ಟಿನಲ್ಲಿ ಸಿಕ್ಕ ಲಕ್ಷ್ಮಣನು, ಆತ್ಮಾರ್ಪಣೆ ಮಾಡಿಯಾದರೂ ರಘುಕುಲವನ್ನು ಕಾಪಾಡುವುದೇ ಲೇಸೆಂದು ಭಾವಿಸಿ, ದುರ್ವಾಸ