ಪುಟ:ವೈಶಾಖ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ವೈಶಾಖ ಈಗ ಪ್ರಲಾಪ ಮಾಡಿದರೆ ಬಂದ ಭಾಗ್ಯವೇನು?- ಇದು ಒಂದು ರೀತಿಯ ಪಂಡ ರೋಷವಲ್ಲವೆ? ಎಂದೆನ್ನಿಸದೇ ಇರಲಿಲ್ಲ ರುಕ್ಕಿಣಿಗೆ, ಮರುಗಳಿಗೆಯಲ್ಲೇ, ಅಯ್ಯೋ ಸಾತುವಿನಂತಹ ಬಜಾರಿ ಹೆಂಗಸನ್ನು ಅಂಕೆಯಲ್ಲಿಟ್ಟು ಅಳಬೇಕಾದರೆ, ನಮ್ಮಣ್ಣನಂತಹ ಬಡಪಾಯಿ ಸಾಧುಪ್ರಾಣಿಯಿಂದ ಸಾಧ್ಯವೆ? ಅದಕ್ಕೆ ಬಲು ಹಮೀರ ಗಂಡೇ ಆಗಿರಬೇಕಿತ್ತು ಎಂದುಕೊಂಡಳು... ಮುಂದೆ ಜಾನಕಿಯು ಮುಟ್ಟಾಗುವ ದಿನಗಳನ್ನೆ ನಾವೆಲ್ಲರೂ ರಹಸ್ಯವಾಗಿ ಲೆಕ್ಕ ಹಾಕುತ್ತಿದೆವು. ಒಂದು ವೇಳೆ ಜಾನಕಿ ಬಸಿರಾದರೆ, ಗರ್ಭವನ್ನು ಯಾರಿಂದ ತೆಗೆಸಬಹುದು?- ಸಾತಾನಿ ವಜ್ರಮನೋರೆ? ಅಥವಾ ಮೇಲ ಕಟ್ಟುವವರ ಜಾತಿ ತಾಯಕ್ಕನ ಕೇಳಲೆ?- ಕೂತರೆ ನಿಂತರೆ ನನ್ನ ಸಂಗಡ ಇದೇ ಪಲ್ಲವಿ ಸಾತು ಅತ್ತಿಗೆಯದು?.... “ತಾಳಿ ಅತ್ತಿಗೆ, ಈಗಲೆ ಯಾಕೆ ಆ ಮಾತೆಲ್ಲ?... ಇನ್ನೂ ದಿನ ಇದೆಯಲ್ಲ. ಕಾದು ನೋಡೋಣ” ಇಲ್ಲ. ನನ್ನ ಯಾವ ಸಮಾಧಾನದ ಮಾತೂ ಅವಳಿಗೆ ಪಥ್ಯವಾಗಿರಲಿಲ್ಲ. ಕಾದು ಮರಳುವ ನೀರಿನಂತೆ ಅವಳು ಪ್ರತ್ಯಕ್ಷವಾಗಿ ಕುದಿಯುತ್ತಿದ್ದಳು. ಎಲ್ಲೂ ನಿಲ್ಲಲಾರಳು, ಕೂರಲಾರಳು, ರಾತ್ರಿ ಮಲಗಿದಾಗಲೂ ಸಹ ಸ್ವಲ್ಪ ಹೊತ್ತಿಗೆಲ್ಲ ಎದ್ದು ಕುಳಿತು, ಅಣ್ಣನ ಮಾತಿನಲ್ಲಿ ಹೇಳುವುದಾದರೆ- ಇದೇ ರಾಗ, ತಾನ, ಪಲ್ಲವಿ ಆರಂಭಿಸಿ, ಅಣ್ಣನಿಗೂ ನಿದ್ರೆ ಕೊಡದೆ ಅವನನ್ನು ಇಡೀ ರಾತ್ರಿ ಜಾಗರಣೆ ಕೆಡುವುತ್ತಿದ್ದಳಂತೆ.... ಜಾನಕಿಗೆ ಹದಿನೈದು ದಿನಗಳ ಪರ್ಯಂತ ಜ್ವರ ಕಾದಿರಬೇಕು. ಈಗ ಜ್ವರ ನಿಂತಿದೆ, ಆಹಾರವನ್ನೂ ಕೊಂಚಕೊಂಚವಾಗಿ ಸೇವಿಸುತ್ತಿದ್ದಾಳೆ. ಅವಳಿಗೆ ಬೇಸರ ಕಳೆಯಲೆಂದು, ಗಿರಿಜಮ್ಮನವರ ಮನೆಯಿಂದ ಹಳುಗುಳಿಮಣೆ ತಂದು, ಅವಳ ಮುಂದುಗಡೆಯೇ ಕುಳಿತು ಸಾತುವಿನೊಂದಿಗೆ ರುಕ್ಕಿಣಿ “ಕಟ್ಟುವ ಮನೆ' ಆಟ ಆಡುವಳು. ಹಳ್ಳುಗುಳಿಮಣೆಯನ್ನು ಗಿರಿಜಮ್ಮನವರ ಮನೆಯಿಂದ ಈಸಿ ತರುವಾಗ, ಅವರು “ಇದೇನೆ ಸೋಜಿಗೆ?... ಸಾತು ನಿನ್ನ- ಹಗಲುಹಾದರಗಿತ್ತಿ, ಶ್ಯಾಮನ ಹಟ್ಟಿಯಲ್ಲಿ ಯಾರೂ ಇಲ್ಲದೇ ಇರುವಾಗ, ಹೊಲೆಗೆ ಬಟ್ಟೆ ಒಗೆಯಲು ಹೋಗುವ ನೆವದಲ್ಲಿ, ಹಗಲು ಹೊತ್ತೇ ಅವನ ಜೊತೆ ಮಲಗಿದ್ದು ಬಾಳಮ್ಮ ಅಂತ ದನಿ ಸಣ್ಣಗೆ ಮಾಡಿ, ಕಣ್ಣು ಮೂಗು ತಿರುಗಿಸ್ತ ಹೇಳ್ತ ಇದ್ದಳಲ್ಲ ನನ್ನ ಸಂಗಡ? ಈಗೇನು ಇಂಥ ಬದಲಾವಣೆ?... ಈಗ ನಮ್ಮ ಹಟ್ಟಿಕಡೆ ಹರಟೆಗೂ ಬರಲ್ಲ.