ಪುಟ:ವೈಶಾಖ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦ ವೈಶಾಖ ತಾನೂ ಕೂಡ ಹರಿಗಲಿನಲ್ಲಿ ಕುಳಿತು ಬಸವಾಪಟ್ಟಣದ ಶಾಲೆಗೆ ಹೋಗಿ ಬರುತ್ತಿದ್ದುದು ನೆನಪಾಯಿತು... ಆಗ ತಾನಿನ್ನೂ ಚಿಕ್ಕವಳು, ಮೈನೆರೆದಿರಲಿಲ್ಲ. ಆದರೂ ಮೈ ಕೈ ತುಂಬಿ ದುಂಡುದುಂಡಾಗಿದ್ದೆ. ನೋಡಿದವರಿಗೆ ಮೈ ನೆರೆದಿರಬಹುದು ಎನ್ನುವಂತೆಯೆ ಕಾಣುತ್ತಿದ್ದೆ. ಆಗ ನಮ್ಮ ತಾಯಿ ಇನ್ನೂ ಬದುಕಿದ್ದರು!- ನನ್ನ ಆಗಿನ ಆರೋಗ್ಯ ನನ್ನ ತಾಯಿಯ ಆರೈಕೆಯ ಫಲವಿರಬೇಕು... ಹೀಗಿರುವಾಗ ಒಂದು ದಿನ ಅಂಬಿಗರ ಹನುಮ, ಸಂಜೆಹೊತ್ತು ಆಚೆ ದಡದಿಂದ ನಾನೊಬ್ಬಳೆ ಹರಿಗಲ ಹತ್ತಿದ್ದು ಕಂಡು, ಒಂದು ಥರಾ ನಕ್ಕಿದ್ದ. ಆ ಮೇಲೆ ಹುಟ್ಟು ಹಾಕುವಾಗ- ಧೂ, ನೆನೆಸಿಕೊಳ್ಳೋಕು ನಾಚಿಕೆ ಆಗುತ್ತೆ- ಚಡ್ಡ ಗುಂಡಿಯನ್ನೆ ಹಾಕಿರಲಿಲ್ಲ... ಆದರೆ ಅವನು ಬೇಕೆಂದು ಹಾಗೆ ಮಾಡಿದ್ದನೊ, ಇಲ್ಲ ಅವನ ಬೇಜವಾಬುದಾರಿಯಿಂದ ಹಾಗಾಗಿತ್ತೊ, ಈಗಲೂ ನನಗೆ ಸಂದೇಹವೆ!... ಹನುಮ ಕಡ್ಡಿಯ ಹಾಗೆ ಬೆಳೆದಿದ್ದ. ಆಳು ಸೆಣಕಲ. ಅವನ್ನು ಮದುವೆಯಾಗಿದ್ದ ಎಂಕಟಿ ನಾನು ರುದ್ರಪಟ್ಟಣಕ್ಕೆ ಹೋದ ಹೊಸದರಲ್ಲಿ ಸಿಕ್ಕಿದ್ದಳು. ಯಾವುದೊ ಮಾತು ಬಂದು, “ನಿನ್ನ ಗಂಡ ಚೆನ್ನಾಗಿದ್ದಾನೇನೆ?” ಕೇಳಿದ್ದೆ. “ಯಾವ ಗಂಡನ್ನ ನೀವು ಕ್ಯಾಳಾದು?” ಅಂತ ಕೇಳಿ ನನ್ನನ್ನೆ ಬೆರಗುಗೊಳಿಸಿದ್ದಳು. ಎಂಕಟಿ ನನ್ನ ವಾರಗೆಯುವಳು. ನಮ್ಮ ತೋಟಕ್ಕೆ ಅವಳು, ಅವಳ ತಾಯಿ ಇಬ್ಬರೂ ಕೂಲಿಕಂಬಲಕ್ಕೆ ಬರುತ್ತಿದ್ದುದುಂಟು ಆಗೊಮ್ಮೆ- “ನಿನ್ನ ಮಗಳನ್ನ ಯಾರಿಗೆ ಕೊಟ್ಟು ಲಗ್ನಮಾಡ್ತೀಯೆ?” ಎಂದು ಎಂಕಟಿಯ ತಾಯಿಯನ್ನ ಅಣ್ಣ ಕೇಳಿದ್ದ. “ಬ್ಯಾರೆ ಯಾಕೆ ಉಡುಕ್ಕಂಡೋಗ್ಲಿ, ಅಯ್ಯಾರೆ?- ನಮ್ಮ ಅನುಮನೆ ಇಲ್ವ?... ಅವಂಗೇ ಕೊಡಾದು” ಎಂದಿದ್ದಳು. ಅದೇ ಮಾತು ನೆನಪಿನಲ್ಲಿ ಉಳಿದಿದ್ದುದರಿಂದ ಎಂಕಟಿಯನ್ನು ಕೇಳಿದ್ದೆ: “ಹಾಗಾದ್ರೆ ಹನುಮನ್ನೆ ನೀನು ಲಗ್ನ ಆದದ್ದು ಅಲ್ಲವಾ?... ಮತ್ತೆ ಯಾವ ಗಂಡನ್ನ ನೀವು ಕೇಳೋದು ಅಂದೆಯಲ್ಲ ಯಾಕೆ?” “ಚು, ಆಗಿದ್ದೆ ಕತ್ರವ್ವ, ಅವನ್ನೇ ಆಗಿದ್ದ. ಇಲ್ಲಾಂತ ಯಾವ ಬಾಯಲ್ಲಿ ಯೋಲ್ಲಿ?- ಆದ್ರೆ ಯಾವ ಸೀಮೆ ಗಮಡಸ ಅವ್ರು?... ಮಗ್ಗಲಲ್ಲಿ ಮನಗಿಸಿಕಂಡೆ, ಒಂದು ಎಲೆ ಕೂಸ ತಬ್ಬಂಡು ಮನಕ್ಕಂಡಗಾಯ್ತಿತ್ತು. ಅದರಾಗೆ ಯಾವ ಸುಕ, ತಗೀರಿ. ಬರಿ ನೀರಿಗೆ ಬೆಟ್ಟ ಅದ್ದಿ ಚೀಪಿದಂಗೆ, ಅಸ್ತೇಯ... ನಾನೂವೆ ಒಂದು ಒಂದೂವರೆ ವರ್ಸದ ತಂಕ ಎಂಗೊ ಸೈಸಿಕಂಡಿದ್ದೆ...”