ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪ ವೈಶಾಖ ಮಾವನ ಪಾಲಿಗೆ ಬಂದಿತು. ಸರ್ಪ ಬಹಳ ಸಮಯ ಕೋಣೆಯೊಳಗೆ ಬುಸುಗುಡುತ್ತ, ಆಗಾಗ ಹೆಡೆಯತ್ತಿ ನಿಲ್ಲುತ್ತ, ಅಲ್ಲಲ್ಲಿ ಸುತ್ತುತ್ತಿತ್ತೇ ಹೊರತು, ಹೊರಗೆ ಮಾತ್ರ ಅದು ಬರಲೇ ಇಲ್ಲ. ಅತ್ತೆಗೂ ರೋಸಿತು. “ಎಲ್ಲಿ, ಬೆಳಕನ್ನು ಇನ್ನೂ ಕೊಂಚ ಹತ್ತಿರ ತಾ” ಎಂದು ಅಣ್ಣನಿಗೆ ಹೇಳಿದಳು. ಮಾವಯ್ಯ ನಾಲ್ಕು ಹೆಜ್ಜೆ ಮುಂದೆ ಹೋಗಿ ಲಾಟೀನನ್ನು ಎತ್ತಿ ಹಿಡಿದರು. ಲಾಟೀನಿನ ಪ್ರಕಾಶ, ತನ್ನೆದುರು ನಿಂತು ತನ್ನ ಚಲನೆಗೆ ಅಡ್ಡಿ ಮಾಡುತ್ತಿರುವ ಜನ, ಇವೆಲ್ಲದರಿಂದಲೂ ಕುಪಿತಗೊಂಡ ಸರ್ಪ ಭಯಂಕರವಾಗಿ ಮೊರೆಯುತ್ತ, ತನ್ನ ಹೆಡೆಯನ್ನು ಅತ್ತಿಂದಿತ್ತ ಭೀಕರವಾಗಿ ಆಡಿಸುತ್ತ, ಇನ್ನೂ ಹತ್ತಿರ ಬಂದರೆ ಮೇಲೆಬೀಳಲು ಸಿದ್ಧತೆ ನಡೆಸಿದಂತಿತ್ತು. ಆದರೆ ಸುಶೀಲತೆ ಮಹಾ ಎದೆಗಾತಿ, ಕೋಲನ್ನು ಮೇಲೆತ್ತಿ ಧೈರ್ಯವಾಗಿ ಕೋಣೆಯೊಳಗೆ ನುಗ್ಗಿ, ಒಕ್ಕಣೆಯಲ್ಲಿ ರೈತರು ಕೋಲಿನಿಂದ ತೆನೆಗಳನ್ನು ಬಡಿಯುವಂತೆ ಆ ಸರ್ಪವನ್ನು ಸದೆಬಡಿಸಿದ್ದಳು!... ಅಂಥವಳಿಗೆ ಕೇವಲ ಹಾವು ಕಚ್ಚಿತು ಎಂಬ ಅರಿವು ಮೂಡಿದೊಡನೆಯೆ ಪ್ರಾಣ ಹೋಗಬೇಕೆ?... ಎಂಥ ವಿಚಿತ್ರ-ಹಾವಿನ ಬಗ್ಗೆ ಅಷ್ಟು ನಿರ್ಲಕ್ಷ್ಯದಿಂದಿದ್ದವಳು, ಅದು ಕಚ್ಚಿತೆಂದು ತಿಳಿದ ಮರುಕ್ಷಣದಲ್ಲೇ ಭೀತಿಯಿಂದ ಕಣ್ಮುಚ್ಚಿದಳಲ್ಲ.... ಅಂದಿನಿಂದ ಆ ಕೋಣೆಯಲ್ಲಿ ಮಲಗುವುದೆಂದರೆ ಸರಸಿಗೂ ನನಗೂ ಎಲ್ಲಿಲ್ಲದ ಭಯ, ಆದರೆ ಸುಶೀಲ ಬಿಡಬೇಕಲ್ಲ: “ಯಾಕೆ ರುಕ್ಕು, ಇಷ್ಟು ಭಯ ಬೀಳೀಯ?- ನಿನ್ನನ್ನು ನೋಡಿ, ನಮ್ಮ ಸರಸಿಗೂ ಪುಕ್ಕಲು ಬಂದುಬಿಟ್ಟಿದೆ. ಈ ಪುಕ್ಕಲು ಬಿಡಬೇಕು. ಕಚ್ಚಿಸಿಕೊಂಡು ಸಾಯಬೇಕೂಂತ ನಮ್ಮ ಹಣೇಲಿ ಬರೆದಿದ್ದರೆ, ಅದನ್ನ ನಾವು ತಪ್ಪಿಸಿಕೊಳ್ಳಲಿಕ್ಕೆ ಆಗುತ್ಯೆ?- ಹುಚ್ಚಿ, ಆ ಮಗೂಗು ಧೈರ್ಯ ಹೇಳಿ, ಸುಮ್ಮನೆ ಹೋಗಿ ಮಲಕ್ಕೊ” ಎಂದು ಒತ್ತಾಯಿಸಿದ್ದಳು ಅತ್ತೆಯ ಬಲವಂತಕ್ಕೆ ಆ ಕೋಣೆಗೆ ಹೋಗಿ ಮಲಗಿದ್ದಾಯಿತು. ಆದರೆ ಮಾವಯ್ಯ ಆ ಕೋಣೆ ಮೂಲೆಯಲ್ಲಿ ದೀಪಾಲೆ ಕಂಬ ಇಡಿಸಿ, ಅದರ ಮೇಲೆ ಹಣತೆ ತಂದಿರಿಸಿ, ಉಪಕಾರ ಮಾಡಿದ್ದರು. ಆ ದೀಪ ಬಂದ ಬಳಿಕವೆ ಸ್ವಲ್ಪ ಧೈರ್ಯದಿಂದ ನಾವಿಬ್ಬರೂ ನಿದ್ರೆ ಮಾಡುವುದು ಸಾಧ್ಯವಾಗಿತ್ತು. ಆದರೂ ಒಂದೊಂದು ಸಲ ನಡುರಾತ್ರಿಯ ವೇಳೆ ಎಚ್ಚರವಾದಾಗ, ಯಾವುದಾದರೂ ಹಾವು ಬಂದು ಪಕ್ಕದಲ್ಲಿ ಮಲಗಿದೆಯೋ ಹೇಗೆ, ಎಂದು ತಡಕಾಡಿ ನಡುಗಿದ್ದೂ ಉಂಟು!... ಇಷ್ಟಾದರೂ ಲಕ್ಕ ಹೇಳಿದ ಸುದ್ದಿಯನ್ನು ಇನ್ನೂ ತಾನು ನಂಬುವುದೇ