________________
ನಾ ವಚ್ಚೇ ಆಗಿದ್ರೆ ಆ ಮಾತು ಬ್ಯಾರೆ. ನೂರು ಜನ ಬಂದು ಬೀಳಿ- ಒಂದು ಕಯ್ಯ ಸ್ವಾಡಿಕತ್ತೀನಿ. ಇವು ಜೊತೆ ಇದ್ರೆ ಮಾತ್ರ ನನ್ನ ಜವಾಬ್ದಾರಿ ಜಾಸ್ತಿ... ಈಗ ಜಾನಕವ್ವನ್ನೂ ಕರಕಂಡು ನೀವೆಲ್ಲರೂ ಸುಮೈಲ್ವಂಡಿ, ಯೇನಾರ ಎಚ್ಚುಕಮ್ಮಿ ಆದ್ರೆ, ನಮ್ಮೂರಿನಾಗೆ ಔಸ್ಥ ಕೊಡುಸಾನ”...
ಲಕ್ಕನ ಮಾತನ್ನ ಸುಲಭವಾಗಿ ತಳ್ಳಿ ಹಾಕುವ ಹಾಗಿರಲಿಲ್ಲ. ಅದರೆ ಅಣ್ಣ, ಅತ್ತಿಗೆ, ಅವರ ಸಂಸಾರ ಎಲ್ಲಾ ಬಂದರೆ, ಅಸ್ಥಿಸಂಚಯನ ಒಂದೇ ಅಲ್ಲದೆ ವೈಕುಂಠ ಮುಗಿಯುವವರೆಗೂ ದರುಮನಳ್ಳಿಯನ್ನು ಅವರು ಬಿಡುವ ಹಾಗಿಲ್ಲ. ಈ ತರ್ಕ ಹೂಡಿ, ಅಣ್ಣ ಬರಲು ಹಿಂದೇಟುಹಾಕುತ್ತಿದ್ದ. ಆದರೆ ಅತ್ತಿಗೆ,
“ಅಯ್ಯೋ, ಇಲ್ಲಿ ನಮ್ಮ ರೇಜಿಗೆ ಇದ್ದೇ ಇದೆ. ಅದು ಯಾವುತ್ತು ಮುಗಿಯುತ್ತೆ?- ನಡಿರಿ ಹೋಗೋಣ. ಒಂದು ಹತ್ತು ಹದಿನೈದು ದಿವಸ ಇಲ್ಲಿ ಕಾಷ್ಠವ್ಯಸನಗಳನ್ನೆಲ್ಲ ಮರೆತು ಹಾಯಾಗಿದ್ದು ಬರೋಣ. ನಿಮ್ಮ ದಾಯಾದಿ ಸುಬ್ಬಾವಧಾನಿಗಳಿಗೆ ಹೇಳಿದರೆ ನಮ್ಮ ಮನೆ ಕಡೆ ನೊಡಿಕೊಳ್ತಾರೆ. ಅವರಿಗೂ ಮಕ್ಕಳು ಜಾಸ್ತಿ: ಮನೆಯೂ ಕಿಷ್ಕಂಧ, ಉಗ್ರಾಣಕ್ಕೂ ನಾವು ಮಲಗುವ ಕೋಣೆಗೂ ಬೀಗ ಹಾಕ್ಕೇನೆ. ಅವರ ಮೂರುನಾಲ್ಕು ಮಕ್ಕಳು ಇಲ್ಲೇ ಓದಿ, ಮಲಗಿ ಮನೆ ನೋಡಿಕೊಳ್ಳಬಹುದು. ಅದರಲ್ಲೂ ಅವರ ಹಿರಿಯ ಮಗ ಸುಬ್ಬರಾಮು ಸಂಗೀತರಾಗ, ಅವನು ತಮ್ಮ ಮನೆಯಲ್ಲಿ ಅಭ್ಯಾಸ ಮಾಡೊದನ್ನ ಇಲ್ಲೆ ಮಾಡಿಕೊಳ್ತಾ ಇರಬಹುದು. ಬೇರೆ ಹುಡುಗರು ಆಗಿಂದೀಗ ಮನೆಬಿಟ್ಟು ಓಡಾಡಿದರೂ ಆ ಸುಬ್ಬರಾಮು ಮಾತ್ರ ಮನೆ ಬಿಟ್ಟು ಅಲ್ಲಾಡಲ್ಲ.”
ಅತ್ತಿಗೆಯ ಕೊನೆಯ ಮಾತುಗಳು ಆಳದಲ್ಲೆಲ್ಲೊ ಕಚಗುಳಿ ಇಟ್ಟಿದ್ದವು. ಅಜೂಬಾಜೂ ಮನೆಗಳಲ್ಲಿ ಸಂಗೀತ ಸೂಸಿದರೆ, ಬೇಸರದಿಂದ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚತ್ತಿದ್ದ ಈ ಸಂಗೀದ್ವೇಷಿ, ತಾನಿಲ್ಲದಾಗ ತನ್ನ ಮನೆಯಲ್ಲೆ ಸುಬ್ಬರಾಮುವಿನ ಸಂಗೀತಾಭ್ಯಾಸಕ್ಕೆ ಅವಕಾಶಮಾಡಿಕೊಟ್ಟದ್ದು ರುಕ್ಕಿಣಿಯ ಒಳಗಡೆ ನಗು ಉಕ್ಕಿಸಿತ್ತು. ಅವಳು-ಜೀವನ ನಮ್ಮ ಕೈಯಲ್ಲಿ ಏನೇನು ಮಾಡಿಸುತ್ತೆ ಎಂದು ಅಚ್ಚರಿಪಟ್ಟಿದ್ದಳು. ಅದರೆ ನಮ್ಮನ್ನು ಒಂದು ಪ್ರಬಲ ಪರೀಕ್ಷೆಗೆ ಒಡ್ಡುವ ಪ್ರಸಂಗ ಬಂದರೆ- ಆಗ ಹೇಗೆ ನಡೆದುಕೊಳ್ಳತ್ತೇವೊ, ನಮಗೆ ಅರಿವಿಲ್ಲದಂತೆ ನಮ್ಮ ಬದುಕಿನ ಕ್ರಮಕ್ಕೆ ವಿರುದ್ಧವಾಗಿ ನಾವೇ ಏನೇನು ಮಾಡಿಬಿಡುತ್ತೇವೋಈಗ ನಮ್ಮ ಅತ್ತಿಗೆ ಮಾಡುತ್ತಿರುವ ಹಾಗೆ!....
ಅತ್ತಿಗೆಯ ಅಭಿಪ್ರಾಯವನ್ನು ಅಣ್ಣ ಒಪ್ಪಿದರೂ ಆ ಸಂಜೆಯ ಪ್ರಯಾಣಕ್ಕೆ ಮಾತ್ರ ಆತ ಸುತರಾಂ ಸಮ್ಮತಿಸಲಿಲ್ಲ.