ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೯೯ ಸಿಕ್ಕಿದಂತಾಯಿತು. ಶೇಷನ ಕೆನ್ನೆಗೆ ರಪರಪ ತೀಡಿ, ಬೆನ್ನಿಗೆ ಗುದ್ದಿ, ಮುಂಗೂದಲು ಜಗ್ಗಿ, ಕೆಳಕ್ಕೆ ತಳ್ಳಿ, ತನ್ನ ಆಕ್ರೋಶವನ್ನೆಲ್ಲ ತೀರಿಸಕೊಂಡಳು... ಶೇಷ ಜಗಮೊಂಡ. ಯಾವ ಶಿಕ್ಷೆಗೂ ಜಗ್ಗಲಿಲ್ಲ. ಅವಳು ತಳ್ಳಿದಾಗ ಕೆಳಗೆ ಬಿದ್ದವನು ಸುಮ್ಮನೆ ಎದ್ದು ನಿಂತಿದ್ದ. ಕಣ್ಣುಗಳಲ್ಲಿ ಒಂದು ಹನಿ ನೀರಿಲ್ಲ, ಕೋಪದಿಂದ ತಾಯಿಯನ್ನು ದುರುದುರು ನೋಡುತ್ತ ನಿಂತಿದ್ದ... ಸಾವಿತ್ರಿಗೆ ಕಿಚ್ಚು ಮತ್ತೂ ಪ್ರಜ್ವಲಿಸಿತು. “ರುಕ್ಕು ಅಟ್ಟಕ್ಕೆ ಹತ್ತಿ, ಬೆತ್ತದ ಕೋಲು ತೆಕ್ಕೊಂಡು. ಇವನಿಗೆ ಇಷ್ಟೇ ಸಾಲದು. ಹುಟ್ಟಿದ ದಿನ ಕಾಣಿಸ್ತೀನಿ!”- ಕಿಡಿ ಕಾರಿದಳು. ಆದರೆ ಹೊರಗಿನಿಂದ ಲಕ್ಕ, “ನೀವು ಇಂಗಾಡಿ ಅಂಗಾಡಿ ವೊಂಡೋದ ಏಳು ಮದ್ದಿನ್ನ ಮಾಡಿ, ನಾವು ಅಸವಾಳು ತಲಪೋವೋತ್ಸೆ ಕಾವು ಕವುಚಿಗತ್ತದೆ. ಆಗ ಕಳ್ಳರು ಬಂದು ಬಿದ್ರೆ, ಆ ದ್ಯಾವರೆ ನಮ್ಮ ಕಾಪಾಡ್ಕಬೇಕು” ಎಂದು ಬೆದರಿಸಿದ್ದು, ಸಾತುವಿನ ಕಿಚ್ಚಿಗೆ ತಣ್ಣೀರೆರಚಿತು. ಆದರೂ ಶೇಷನನ್ನು ಮನಸ್ವೀ ಬೈಯುತ್ತಲೆ ಗಾಡಿ ಹತ್ತಿದ್ದಳು. ಅಶ್ವತ್ಥಣ್ಣ ಮಾತ್ರ ಸುಬ್ಬರಾಮುವನ್ನು ಒಂದು ಪಕ್ಕಕ್ಕೆ ಕರೆದು, “ನಮ್ಮ ಶೇಷ ಅಂಥ ಕೆಟ್ಟ ಹುಡುಗ ಏನಲ್ಲ. ಪೋಲಿ ಸಹವಾಸ, ಏನೂ ಮಾಡಲಿಕ್ಕಾಗುತ್ತೆ. ಗಾದೆ ಕೇಳಿಲ್ಲವೆ- ಸಹವಾಸದಂಥ ಬುದ್ದಿ, ಆಹಾರದಂಥ ಲದ್ದಿ... ಬೇಳೀತ ಬೆಳಿತ ಸರಿಹೋಗ್ತಾನೆ. ನಾವು ಬರೋವರೆಗೂ ಅವನ ಊಟೋಪಚಾರ ನೀನೇ ನೋಡಿಕೋಬೇಕು. ತಗೊ” ಎನ್ನುತ್ತ ಇಪ್ಪತ್ತು ರೂಪಾಯಿಗಳನ್ನು ಕೈಗಿಡಲು ಹೋದ. “ಇದೇನು, ನೀವು ಮಾಡ್ತಿರೋದು?... ಚೆನ್ನಾಗಿದೆ. ಶೇಷ ಒಬ್ಬನಿಗೆ ಕೇವಲ ಹತ್ತು ಹದಿನೈದು ದಿವಸ ಊಟ ಹಾಕಲಿಕ್ಕೆ ನಿಮ್ಮಿಂದ ಹಣ ತೆಗೋಬೇಕೆ?... ಸುಮ್ಮನೆ ನಿಮ್ಮ ಪಾಡಿಗೆ ನೀವು ಹೋಗಿ, ಅವನ ಯೋಗಕ್ಷೇಮ ನಿಮಗಿರಲಿ” ಎಂದು ಸುಬ್ಬರಾಮು ನಿರಾಕರಿಸಿದ್ದ. ಎಲ್ಲರೂ ಕುಳಿತಿದ್ದು ಖಾತರಿಯಾದ ತರುವಾಯ ಲಕ್ಕನೂ ಬಲಗೋಲು ಎತ್ತನ್ನು ಚಿಗಿಸಿ ದಾರಿಮಾಡಿಕೊಳ್ಳುತ್ತ ಗಾಡಿಯ ಮುಂಭಾಗಕ್ಕೆ ನೆಗೆದು ಕುಳಿತಿದ್ದ. ಹಗ್ಗವನ್ನು ಕೈಯಲ್ಲಿ ಹಿಡಿದು ಅವನು ಹುಶ್ ಹುಶ್ ಸದ್ದು ಮಾಡಿ, ಎತ್ತುಗಳ ಕುಂಡಿಬಳೆಗೆ ಕೈಯಿಟೊಡನೆಯ ಎತ್ತಿನ ಬಂಡಿಯು ಮುಂದಕ್ಕೆ ಹೊರಟಿತು. “ಲಕ್ಕ, ನಿಮ್ಮ ನಾಯಿ ಬೊಡ್ಡ ಎಲ್ಲಿ ಕಾಡ್ತಾನೆ ಇಲ್ಲವಲ್ಲ? ಊರಿನೊಳಗೆ ಎಲ್ಲಾದರೂ ಉಳಿದುಬಿಟ್ಟತೇ ಹೇಗೆ?”- ಉದ್ಗಾರ ತೆಗೆದಿದ್ದವಳು ರುಕ್ಕಿಣಿ. “ಅಯ್, ನೀವು ಸರಿ, ನಿಮ್ಮ ಬುತ್ತಿ ವಾಶಣ ಗಗನೆ ಗಾಳಿ ಮೈಯೊಳಗಾಗೆಲ್ಲ ತಂಬುಕಂಡಿದ್ದಾಗ, ಬೊಡ್ಡ ಅದೆಲ್ಲಿ ತಾನೆ ಹ್ವಾದಾತುಬುಡಿ...