ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೫೭ ೧೩ ಇತ್ತ ಗುಡುಗುಡು ಓಡಾಡುತ್ತ ಮುದ್ದಮುದ್ದಾಗಿ ಲಲ್ಲೆಗರೆಯುತ್ತ ತನ್ನ ಮನೆ, ಮನಗಳೆರಡನ್ನೂ ಮುದಗೊಳಿಸುತ್ತಿದ್ದ ಪುಟ್ಟ ಸರಸಿಯ ಸಹವಾಸ ಅನೇಕ ದಿನಗಳಿಂದಲೂ ತಪ್ಪಿಹೋಗಿ, ರುಕ್ಕಿಣಿ ಮಂಕುಕವಿದವಳಂತೆ ಯಾಂತ್ರಿಕವಾಗಿ ಮನೆಗೆಲಸವನ್ನು ನಿರ್ವಹಿಸುತ್ತಿದ್ದಳು. ಯಾವ ಕೆಲಸ ಮಾಡುತ್ತಿದ್ದರೂ ಸರಸಿಯ ನೆನಪೇ ಮರುಕಳಿಸುವುದು.... ಸರಸಿ ಊರಿನಲ್ಲಿ ತನ್ನ ಸಮವಯಸ್ಕ ಗೆಳತಿಯರ ಒಂದು ದಂಡನೆ ಕೂಡಿಹಾಕಿದ್ದಳು. ಆ ಮಕ್ಕಳ ಆಟಪಾಟ, ಕುಣಿತ ಲಲ್ಲೆಗಳು ವಿಶೇಷವಾಗಿ ಮನೆಯ ಹೊರಗೆ ಕೇರಿಯ ಬೀದಿ ಬಯಲುಗಳಲೊ ನಡೆಯುತ್ತಿದ್ದರೂ ಕೆಲಸಮಯ ತಮ್ಮ ಮನೆಯೊಳಗೂ ಅವು ನಡೆಯುತ್ತಿದ್ದುದುಂಟು. ಮನೆಯೊಳಗಂತೂ ಅವರ ಹಾಡು, ಕುಣಿತ, ಜೂಟಾಟಗಳ ಸಂಭ್ರಮ ಮನೆಯ ಹೊರಗಿದ್ದವರಿಗೆ ಒಳಗಡೆ ಒಂದು ಬಾರಿ ಜಾತ್ರೆಯೇ ನಡೆದಿದೆಯೇನೋ ಎಂಬ ಭ್ರಮೆಯನ್ನು ಹುಟ್ಟಿಸುವಂತಿರುತ್ತಿತ್ತು. ಒಮ್ಮೊಮ್ಮೆ ಸರಸಿಯು ರುಕ್ಕಿಣಿಯನ್ನೂ ಬಿಡದೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದುದೂ ಉಂಟು. ಆ ಮಕ್ಕಳು ಕಣ್ಣಾಮುಚ್ಚಾಲೆ ಆಟವಾಡುವಾಗ ರುಕ್ಕಿಣಿಯೇ ಸರದಿಯ ಪ್ರಕಾರ ಒಂದೊಂದು ಮಗುವಿನ ಕಣ್ಣನ್ನೂ ಮುಚ್ಚಿ, ಇತರೇ ಮಕ್ಕಳು ಅವಿತುಕೊಂಡ ತರುವಾಯ ಆ ಮಗುವಿನ ಕಣ್ಣು ಮುಚ್ಚಿದ ಕೈಯನ್ನು ತೆಗೆದು ಬಿಡುತ್ತಿದ್ದಳು. ಬಚ್ಚಿಟ್ಟು ಕೊಂಡವರನ್ನು ಹಿಡಿದುಬಿಟ್ಟಳೆಂದರೆ ಸರಸಿಯ ಕೇಕೆ, ನಗು, ಸಡಗರಗಳು ಮನೆಯ ಛಾವಣಿಯನ್ನೂ ಹಾರಿಸಿಬಿಡುವಂತೆ ಇರುತ್ತಿತ್ತು. ಆಡುತ್ತ ಆಡುತ್ತ ಒಂದು ಬಾರಿ ಶೇಷಪ್ಪನವರ ಮಗಳು ನಳಿನಿಯನ್ನು ಹಿಡಿದುಬಿಟ್ಟ ಆನಂದದಲ್ಲಿ ಸರಸಿ ಓಡಿಬಂದು ರುಕ್ಕಿಣಿಯನ್ನು ತಬ್ಬಿದ್ದಳು. ರುಕ್ಕಿಣಿಯೂ ಅವಳ ಸಂತೋಷದಲ್ಲಿ ಭಾಗಿಯಾಗಿ ಅವಳ ಪುಟ್ಟ ತುಟಿಗಳಿಗೆ ಮೇಲಿಂದ ಮೇಲೆ ಮುತ್ತಿಟ್ಟಳು... ಆಗ “ಮಕ್ಕಳ ತುಟಿಗೆ ಮುತ್ತಿಟ್ಟಂಗೆ ಅಂತಾವ ಮೊದ್ಧ ಗಾದೆ ಯೋಳಕಿಲ್ವ?ಅದರಾಗ್ಯಾವ ರುತಿ ಇದ್ದದು?” -ಅಂದು, ಕುಹಕವಾಗಿ ನಗುತ್ತ ಬಂದ ನಂಜೇಗೌಡನನ್ನು ಕಂಡು, ಅವನಾಡಿದ ನುಡಿಗಳಿಂದ ಕ್ರುದ್ಧಳಾಗಿ, “ಅದರ ರುಚಿಯನ್ನು ಬಲ್ಲವರೇ ಬಲ್ಲರು” ಎಂದು ಹೇಳಲು ಹೋಗಿ, ಈ ನೀಚನ ಸಂಗಡ ಮಾತು ಬೆಳೆಸುವುದೂ ಉಚಿತವಲ್ಲವೆಂದು ಮನಗಂಡು, ಸರಸಿಯನ್ನು ಅಡಲು ಬಿಟ್ಟು, ಅಡಿಗೆ ಕೋಣೆಯತ್ತ ಅಡಿಯಿಟ್ಟಳು, ನಂಜೇಗೌಡ ಮೀಸೆಯ ಮರೆಯಲ್ಲಿ ನಗುತ್ತ, | 3G 3G @