________________
ಸಮಗ್ರ ಕಾದಂಬರಿಗಳು ೧೭೩ ಯಾರನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಯಾವಾಗಲೂ ಮಂಕು ಕವಿದಂತೆ ಇರುತ್ತಿದ್ದರು. ಹಿಂದೆ ಗಿಡಿಯಲ್ಲಿ ಹರಿಕಥೆ ಇದ್ದರೆ ಲಗುಬಗೆಯಿಂದ ಧಾವಿಸುತ್ತಿದ್ದರು. ಆದರೆ ಆಗ ಯಾವ ಹರಿಕಥೆಯಲ್ಲೂ ಅಸ್ಥೆ ಕಳೆದುಕೊಂಡು ಸಾಮಾನ್ಯವಾಗಿ ಮನೆ ಬಿಟ್ಟು ಹೊರಗೆ ಕಾಲಿಡುತ್ತಿರಲಿಲ್ಲ. ಹೀಗಾಗಿ ಜೋಯಿಸರ ಹೆಣ್ಣುಮಕ್ಕಳು ತನಗೆ ತೋರುತ್ತಿದ್ದ ವಿಶೇಷ ಪ್ರೀತಿಗಾಗಿ, ರುಕ್ಕಿಣಿ ಅವರ ಮನೆಗೆ ಹೋಗುತ್ತಿದ್ದಳು. ಆದರೆ ಜೋಯಿಸರ ಹೆಂಡತಿಯ ಅನಾದರ ಅವಳನ್ನು ಆಚೆಗೆ ದಬ್ಬಿದಂತಾಗುತ್ತಿತ್ತು. ಈ ಕಾರಣದಿಂದ ಅವಳು ಈ ಕೇರಿಯ ಬೇರೆ ಕೆಲವು ಮನೆಗಳನ್ನು ತನ್ನ ಬೇಸರ ಕಳೆಯಲು ಅರಿಸಿಕೊಂಡಿದ್ದಳು. ಅದರಲ್ಲಿ ಕೇಶವಯ್ಯನ ಮನೆಯೂ ಒಂದು, ಅಲ್ಲಿ ಪಗಡೆಯಾಡುವುದಕ್ಕೂ ಶುರು ಹಚ್ಚಿ, ಲಕ್ಷಮ್ಮನವರಿಂದ “ಯಾಕೆ ರುಕ್ಕೂ, ಈ ಚಾಲಿ ನಿನಗ್ಯಾಕೆ ಅಂಟಿತು?... ಕೇಳಿಲ್ಲವೇನೆ ಹಿರಿಯರು ಹೇಳುವ ಮಾತ್ತು?... ಪಗಡೆ ಆಡಿ ಪಾಂಡವರು ಕೆಟ್ಟರು, ಇಸ್ಪೀಟಾಡಿ ಇದ್ದಬದ್ದವರೆಲ್ಲ ಕೆಟ್ಟರು ಅಂದು?... ಇದ್ದಬದ್ದವರ ವಿಚಾರ ಯಾಕೆ?- ನನ್ನ ತಮ್ಮನ ವಿಷಯಾನೆ ತೆಗೆದುಕ್ಕೊ ಎಡತೊರೇಲಿ ಹೊಟಲಿಟ್ಟು ಭರ್ಜರಿ ಸಂಪಾದ್ರೆ ಮಾಡಿದ್ದ. ಏತನ್ಮಧ್ಯ ಯಾವತಲೆಮಾಸಿವನು ಹಿಡಿಸಿದನೊ ಹುಚ್ಚನ್ನ- ಅದೇನೊ ಮೂರೆಲೆ ಆಟವಂತಲ್ಲಮ್ಮ, ಆ ಚಟಕ್ಕೆ ಬಲಿಯಾಗಿ ಕೊನೆಗೆ ಸಮಸ್ತ ಆಸ್ತೀನೂ ಕಳೆದುಕೊಂಡೂ ಎಕ್ಕಹುಟ್ಟೋದ!...” ಎಂಬ ಬುದ್ದಿವಾದದ ಮಾತನ್ನು ಕೇಳಬೇಕಾಗಿ ಬಂದಿತ್ತು. ಆದರೂ ರುಕ್ಕಿಣಿ, “ಆದರೂ ನಾವೇನು ಪಾಂಡವರ ಹಾಗೆ ಪಣ ಇಟ್ಟು ಆಡಿಲ್ಲವಲ್ಲ. ಲಕ್ಷಮ್ಮನೋರೆ...” ಎಂದು ಸಮಾಧಾನ, ಹೇಳಿ, ತನ್ನ ಪಗಡೆಯಾಟವನ್ನು ಮುಂದುವರೆಸಿದ್ದಳು. - ಹೀಗೆ ಒಂದು ದಿನ ಕೇಶವಯ್ಯನ ಮಡದಿಯ ಸಂಗಡ ಪಗಡೆಯಾಡುತ್ತಿದ್ದಳು. ಕೇಶವಯ್ಯನ ಹೆಂಡತಿ ಪಗಡೆಯಾಟದಲ್ಲಿ ನಿಸೀಮೆ. ದಂತದ ದಾಳಗಳನ್ನು ಹಿಡಿದು ಅವಳು ಉರುಳಿಸುತ್ತಿದ್ದ ವರಸೆಯಲ್ಲಿ, ಅವಳು ಕೇಳಿದ ಲೆತ್ತ ಬೀಳುವುದು. ದುಗ ಎಂದರೆ ದುಗ, ಇತ್ತಿಗ ಎಂದರೆ ಇತ್ತಿಗ, ಪದಿ ಎಂದರೆ ಪದಿ, ಪಗಡೆಕಾಯಿಗಳನ್ನು ನಡೆಸುವದರಲ್ಲಿಯೂ ಆಕೆ ಬಲು ಚೂಟಿ. ಆಟ ಸಾಗಿದಂತೆ ಅವಳದೇ ಮೇಲುಗೈ ಆಗುವುದು ಸ್ಪಷ್ಟವಾಗುತ್ತಿತ್ತು. ಆಗ ತನ್ನ ಹೆಂಡತಿ ದಾಳ ಹಾಕಿದಂತೆ, ಪಗಡೆಕಾಯಿಗಳನ್ನು ರುಕ್ಕಿಣಿಯ ಪರವಾಗಿ ನಡೆಸುವುದರಲ್ಲಿ ಜೊತೆಯಾಗಿದ್ದ ಕೇಶವಯ್ಯನು ಸುಮ್ಮನಿರದೆ, ಇತ್ತಿಗೆ ಬದ್ದಾಗ, “ಇತ್ತಿಗಂ ಲೆತ್ತನಾಶನಂ” ಎಂದು ಬಿಟ್ಟ!