ಪುಟ:ವೈಶಾಖ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೪ ವೈಶಾಖ ತನ್ನ ಗಂಡ ಎದಿರಾಗಿ ಬೇರೋಬ್ಬಳು ಹೆಂಗಸಿನ ಪರ ವಹಿಸಿ, ಆಟವಡುವಾಗ ನಡುನಡುವೆ ಪ್ರವೇಶ ಮಾಡುತ್ತಿದ್ದುದು ಸೀತಾಲಕ್ಷ್ಮಿಗೆ ವಿಪರೀತವಾದ ಕಸಿವಿಸಿಯನ್ನುಂಟುಮಾಡಿತ್ತು. ಈಗ ಗಂಡನ ಬಾಯಿಂದ ಇಂಥ ಮಾತು ಹೊರಟ ಕೂಡಲೆ, “ಇನ್ನೋಡಿ ಅಂದ್ರೆ, ನೀವು ರುಕ್ಕಗೆ ಕಾಯಿ ನಡೆಸಿಕೊಟ್ಟುಬೇಕಾದ ಹಾಗೆ ಸಹಾಯ ಮಾಡಿ. ನಾನೇನು ಬೇಡ ಅನ್ನಲ್ಲ, ಆದ್ರೆ ನಾನು ದಾಳ ಬಿಡುವಾಗಲೆಲ್ಲ ಹೀಗೆ ಏನಾದರೂ ನಾಸಬಾಯಿ ನುಡಿದು ಬೇಸರಪಡಿಸಿದರೆ, ನಾನು ಸಹಿಸಿ ಸುಮ್ಮನೆ ಕೂರಲ್ಲ” ಎಂದಳು. ಕೇಶವಯ್ಯ ತನ್ನ ಎರಡೂ ಕೆನ್ನೆಗಳಿಗೆ ಹೊಡೆದುಕೊಳ್ಳುತ್ತ, “ಶಾಂತಂ ಪಾಪಂ, ತಪ್ಪಾಯ್ತು.... ಇನ್ನು ಮುಂದೆ ಬಾಯಿ ಬಿಚ್ಚಲ್ಲ.” ಪಶ್ಚಾತ್ತಾಪ ಶಾಂತಂ ಪಾಪಂ-ನಟಿಸಿದ. ಆದರೆ ಸ್ವಲ್ಪ ವೇಳೆ ಕಳೆಯುವುದರಲ್ಲಿ ಮರೆಮೋಸದಿಂದ ರುಕ್ಕಿಣಿಯ ಕಾಯಿಯೊಂದನ್ನು ಪಗಡೆ ಚಾರಿಯ ಮಧ್ಯದ ಚೌಕುಳಿಯಲ್ಲಿ ಮಲಗಿಸಿ, ಹಣ್ಣುಮಾಡಿಬಿಟ್ಟ- ಆಡುವವರಿಬ್ಬರಿಗೂ ತಿಳಿಯದ ಹಾಗೆ! ಆದರೆ ಆಗತಾನೇ ಒಳಗೆ ಪ್ರವೇಶಿಸಿದ ಲಕ್ಷಮ್ಮನವರು ಕೇಶವಯ್ಯನ ಕೈ ಚಳಕವನ್ನು ನೋಡಿಬಿಟ್ಟರು! ನೋಡಿದವರು ಮೌನವಾಗಿಯಾದರೂ ಇರಬಾರದೆ? “ಇದೇನೆ ಸೀತಾಲಕ್ಷ, ಎತ್ತಕಡೆ ನೋಡಿಕೊಂಡು ಆಡ್ತಾ ಇದೀಯೇ?... ಆಟದ ಕಡೆ ಕೊಂಚ ನಿಗಾ ಇರಲಿ” ಎಂದು ಅನುಮಾನ ಹುಟ್ಟಿಸಿದರು ಆ ಮಾತುಗಳು ಕಿವಿಗೆ ಬೀಳುತ್ತಲೂ ಸೀತಾಲಕ್ಷ್ಮಿಯು ಪಗಡೆ ಚಾರಿಯನ್ನೇ ಸೂಕ್ಷ್ಮವಾಗಿ ಕಣ್ಣಾಡಿಸಿ ವೀಕ್ಷಿಸಿದಳು. ಥಟ್ಟನೆ ಹಣ್ಣಿನ ಮನೆಯಲ್ಲಿ ಮಲಗಿಸಿದ್ದ ರುಕ್ಕಿಣಿಯ ಹಸಿರು, ಕಾಯಿ ಕಣ್ಣಿಗೆ ಬಿದ್ದಿತು, ಒಡನೆಯೆ, - “ಅಯ್ಯೋ, ಅಯ್ಯೋ- ಈ ಹಸಿರು ಕಾಯಿ ಯಾವಾಗ ಕಣ್ಣಾಯ್ತು?... ಮೋಸ, ಮೋಸ...” ಎಂದು ಕಿರುಚಿದಳು. ಕೇಶವಯ್ಯನ ಕೈಚಳಕವನ್ನು ಗಮಿನಿಸದಿದ್ದ ರುಕ್ಕಿಣಿಯು ಏನು ಹೇಳಲೂ ಅಸಮರ್ಥಳಾಗಿ ತೆಪ್ಪೆನ ಕುಳಿತಳು. ಕೇಶವಯ್ಯ ಮಾತ್ರ ಸುಮ್ಮನಿರದೆ, “ಸುಮ್ಮನೆ ಆಡೆ. ಅದನ್ಯಾರು ಈಗ ಮಲಗಿಸಕ್ಕೆ ಬಂದಿದ್ದರು?” ಎಂದುಬಿಟ್ಟ, ಸೀತಾಲಕ್ಷ್ಮಿಯ ಕೋಪ ಭುಗ್ ಎಂದಿತು. “ಇಂಥ ಮೋಸದ ಆಟ ಆಡಿ ಗೆಲ್ಲದಿದ್ದರೂ ಆಗತ್ತೆ” ಎಂದು ಪಗಡೆ ಹಾಸನ್ನು ಮಗುಚಿ, ಒಳ ನಡೆದಳು.