ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೯೧ ಕಿವಿಗೆ ಬಿದ್ದಂತಿಲ್ಲ!... ಹಾಗಾದರೆ ಇದು ಯಾರಿರಬಹುದು?... ಒಂದು ಕ್ಷಣ ತರಿಸಿದಳು. ಏನಾದರೂ-ಇದು, ಗತಿಸಿದ ತನ್ನ ಪತಿಯ ಪ್ರೇತವಾಗಿರಬಹುದೆ?... ಯಾಕೆ, ಪ್ರತಿವರ್ಷವೂ ಮಾವಯ್ಯ ತಪ್ಪದೆ ಮಗನಿಗೆ ಕರ್ಮಾದಿಗಳನ್ನು ವಿಧಿವತ್ತಾಗಿ ಮಾಡಿ, ಪಿಂಡ ಇಡುತ್ತಿಲ್ಲವೆ?... ಕ್ರಮವಾಗಿ ಇಷ್ಟೆಲ್ಲ ಮಾಡಿದರೂ ತನ್ನವರಿಗೆ ಮುಕ್ತಿ ದೊರಕಲಿಲ್ಲವೆ? ಯಾರಿಗೆ ಗೊತ್ತು? ಏನು ಲೋಪವಾಯಿತೊ?... ಅಥವಾ ಕಿರಿವಯಸ್ಸಿನ ತನ್ನ ಪತಿಗೆ ಹೆಂಡತಿಯ ಮೇಲಿನ ಮೋಹ ಇನ್ನೂ ತೊರೆದಿಲ್ಲವೊ?... ತನ್ನ ಪತಿಯ ಸ್ಮರಣೆ ಬಂದೊಡನೆಯೆ, ಅವನ ರೂಪು ಕಣ್ಣಿನ ಮುಂದೆ ತೇಲಿದಂತಾಗಿ ಉತ್ತುಕಗೊಂಡಳು. ಆದರೆ ಮರುಗಳಿಗೆಯಲ್ಲಿಯೆ, “ಈಗ ಅವರು ಬಂದರೆ ಕೇವಲ ಅಸ್ಥಿಪಂಜರವಾಗಿ ಮಾತ್ರ ಕಾಣಬಹುದು” ಅನ್ನಿಸಿದಾಗ, - “ಅಯ್ಯಯ್ಯೋ, ಈ ಸ್ಥಿತಿಯಲ್ಲಿ ಅವರನ್ನು ನಾನು ಹೇಗೆ ನೋಡಲಿ?...ಅವರು ಈ ಸ್ಥಿತಿಯಲ್ಲಿ ನನಗೆ ಕಾಣಿಸಿಕೊಳ್ಳದಿದ್ದರೇ ಲೇಸು” ಎಂದು ತವಕಗೊಂಡಳು. - ಅವಳ ಮೊರೆಗೆ ಓಗೊಟ್ಟಂತೆ ಹೆಜ್ಜೆಯ ಸಪ್ಪಳ ಹಠಾತ್ತನೆ ನಿಂತಿತು. ಕುತೂಹಲ ಕೆರಳಿ ಉಸಿರು ಕಟ್ಟಿ ಕುಳಿತಳು... ಈ ಅನುಭವ ಅವಳಿಗೆ ತೀರಾ ಹೊಸದು. ಅವಳು ಲಗ್ನವಾಗಿ ಈ ಮನೆಗೆ ಕಾಲಿಟ್ಟ ದಿನದಿಂದ ಇಂಥದೊಂದು ವಿಚಿತ್ರ ಎಂದೂ ನಡೆದಿರಲಿಲ್ಲ.... ಏನಿರಬಹುದುದು?-ಎಂಥದು ಇದು?... ಅಥವಾ ಇದೆಲ್ಲ ನನ್ನ ಮನಸಿನ ಭ್ರಾಂತಿಯೊ?... ಯಾವ ಪರಿಯಲ್ಲಿ ಆಲೋಚಿಸಿದರೂ ಬಗೆಹರಿಯಲಿಲ್ಲ. ಎಲ್ಲ ತೊಡಕು, ತೊಡಕು, ಭೀತಿಯಿಂದ ಕಂಪಿಸಿದಳು-ತಕ್ಷಣ ಮಂತ್ರವೊಂದು ಅವಳ ಬಾಯಿಯಿಂದ ಹೊರಬಿದ್ದಿತು: “ಅರ್ಜುನಃ ಫಲ್ಕುನಃ ಪಾರ್ಥಃ...” ಇತ್ಯಾದಿ - ಕಲಿಪಾರ್ಥನನ್ನು ಅವನ ಅನೇಕ ಹೆಸರುಗಳಿಂದ ನೆನೆಯುವ ಈ ಮಂತ್ರವನ್ನು ಬಾಲ್ಯದಲ್ಲಿ ಅವಳ ತಂದೆ ಬಾಯಿಪಾಠ ಮಾಡಿಸಿದ್ದರು. ಒಮ್ಮೆ ರುದ್ರಪಟ್ಟಣದ ತಮ್ಮ ತೋಟದಲ್ಲಿ ತಂದೆಯೊಡನೆ ಇದ್ದಾಗ, ಗುಡುಗು ಮಿಂಚಿನ ಮಳೆ ಆರಂಭವಾಗಿ ದೂರದಲ್ಲಿ ಸಿಡಿಲೊಂದು ಅಬ್ಬರಿಸಿತು. ಭಯದಿಂದ ನಡುಗುತ್ತಿದ್ದ ತನ್ನನ್ನು ಆ ಕೂಡಲೆ ಬರಸೆಳೆದು ತಬ್ಬಿ ಈ ಮಂತ್ರವನ್ನು ಗಟ್ಟಿಯಾಗೇ