________________
ಸಮಗ್ರ ಕಾದಂಬರಿಗಳು ೧೯೩ ಇಲ್ಲ, ತನ್ನ ಉದ್ವಿಗ್ನಗೊಂಡ ಮನಃಸ್ಥಿತಿಯ ಕಳವಳವೆ?... ಹೀಗೆ ಚಿಂತಿಸುತ್ತ ಕುಳಿತೇ ರಾತ್ರಿಯನ್ನು ಕಳೆದಳು. ಬೆಳಗಾದದ್ದೆ ತಡ, ಕುತೂಹಲದಿಂದ ಬಾಗಿಲು ದಬ್ಬಿ ಹೊರಬಂದು ನೋಡಿದಳು, ಎನಿದು ಸೋಜಿಗ? -ತಾನು ಬಾಗಿಲಿನ ಮುಂದುಗಡೆ ಹರಡಿದ್ದ ಬೂದಿಯ ಮೇಲೆ ಹೆಜ್ಜೆ ಗುರುತುಗಳು ನೇರವಾಗಿ ಮೂಡಿವೆ!... ಪಿಶಾಚಿಯಾಗಿದ್ದರೆ ಅದರ ಹೆಜ್ಜೆ ತಿರುಗಮುರುಗ ಆಗಿರಬೇಕಿತ್ತು. ಅಲ್ಲವೆ? ಈ ಸಂಗತಿಯಿಂದ ಚಕಿತಳಾದ ರುಕ್ಕಿಣಿ ಆ ಹೆಜ್ಜೆಯ ಜಾಡನ್ನೆ ಹಿಡಿದು ಪರೀಕ್ಷಿಸುತ್ತ ಮುಂದುವರಿದಳು, ಬೂದಿಯಿಂದ ಅವೃತವಾದ ಹೆಜ್ಜೆ ಗುರುತು ಹಜಾರದ ಮೂಲೆಗೆ ಮಲಗಿದ ಮಾವಯ್ಯನವರೆಗೂ ಸಗಿ, ಅಲ್ಲಿ ಕೊನೆಗಂಡಂತಿತ್ತು! ಮಾವಯ್ಯ ಗೊರಕೆ ಹೊಡೆಯುತ್ತಿದ್ದರು. ಅವರು ಹೊದೆದಿದ್ದ ಹಸಿರು ಬಣ್ಣದ ಕಾಶ್ಮೀರ ಶಾಲಿನ ಹೊರಗೆ, ಅವರ ಒಂದು ಪಾದ ಮಾತ್ರ ಚಾಚಿಕೊಂಡಿತ್ತು. ರುಕ್ಕಿಣಿ ನೋಡುತ್ತಾಳೆ-ಆ ಪಾದದ ಅಡಿಯ ಭಾಗಕ್ಕೆಲ್ಲ ಬೂದಿಯ ಲೇಪ... ಇದು ಸಾಧ್ಯವೆ? ತಲೆ ಗಿರಗಿರನೆ ಸುತ್ತಿದಂತಾಯಿತು. ಅಂಗಳದಲ್ಲಿ ಕಂಬವೊಂದರ ಆಸರೆ ಸಿಗದಿದ್ದಲ್ಲಿ ನಿಶ್ಚಯವಾಗಿಯೂ ಕೆಳಗೆ ಬೀಳಬೇಕು. ಹೇಗೋ ಸಾವರಿಸಿಕೊಳ್ಳುತ್ತ ನಿತ್ಯದ ಮನೆಗೆಲಸದಲ್ಲಿ ತೊಡಗಿದಳು. ಮತ್ತೆ ಮತ್ತೆ ಆ ದಿನವೆಲ್ಲ ಅದೇ ಪ್ರಶ್ನೆ ಅವಳ ಮನಸ್ಸನ್ನು ಕಡೆಯಿತು. ಇದು ಸಾಧ್ಯವೆ?... ತನ್ನ ಮಾವಯ್ಯ.... ನಿಷ್ಠಾವಂತ ವೈದಿಕ!... ತನ್ನನ್ನ ಇಲ್ಲಿ ಯತನಕ ತನ್ನ ಸ್ವಂತ ಮಗಳಿಗಿಂತಲೂ ಅತಿಶಯವಾಗಿ ನಡೆಸಿಕೊಂಡ ಪುಣ್ಯಾತ್ಮ... ಇದು ಇವರ ಹೆಜ್ಜೆ ಗುರತೆ?... ಬಿಡಿಸಲಾಗದ ಅಂಕಗಣಿತದ ಲೆಕ್ಕವೊಂದರ ಮುಂದೆ ಬೆರಗಾಗಿ ಕೂರುವ ಮಕ್ಕಳಂತೆ ಈ ಕ್ಲಿಷ್ಟ ಸಮಸ್ಯೆಯನ್ನು ಎದಿರಿಸಲಾರದೆ ಅವಳು ತಲ್ಲಣಗೊಂಡು ತರಿಸಿಹೋದಳು. ಆ ರಾತ್ರಿಯಿಡೀ ಯಾವ ಗಳಿಗೆಯಲ್ಲಿ ಏನಾಗುವುದೋ ಎಂಬ ಭೀತಿಯ ನಿರೀಕ್ಷೆಯಲ್ಲಿ ಕಳೆಯಿತು. ಯಾವ ಒಂದು ಸಣ್ಣ ಸದ್ದಿಗೂ ಚಳುಕು ಹೊಡೆದಂತೆ ಅವಳ ಕಿವಿ ತೆರೆದುಕೊಳ್ಳುವುದು. ಆದರೆ ದೈವಕೃಪೆಯಿಂದ ಯಾವ ಹೆಜ್ಜೆ ಸಪ್ಪಳವೂ ಕೇಳಿಬರಲಿಲ್ಲ.