________________
೧೯೬ ವೈಶಾಖ ಸ್ವರಪೂರ್ವಕ ಸೊಗಸುಗಾರಿಕೆಯಿಂದ ಉಚ್ಚರಿಸುವುದನ್ನು ರುಕ್ಕಿಣಿಯು ತಲೆದೂಗುತ್ತ ಜ್ಞಾಪಿಸಿಕೊಂಡಳು... ಕೂಡಲೆ, ಈ ವೇದಮಂತ್ರಗಳನ್ನು ತನ್ನಂತಹ ಸ್ತ್ರೀಯರಿಗೆ ಯಾಕೆ ಕಲಿಸದೇ ಹೋದರು-? ನಮ್ಮ ಕಂಠದಿಂದ ಈ ಮಂತ್ರಗಳು ಇನ್ನೂ ಇಂಪಾಗಿ ಹೊಮ್ಮುತ್ತಿದ್ದವೋ ಏನೊ, ಎಂದು ತರ್ಕಿಸಿದಳು. ಬಿಚ್ಚಿಹೋದ ಕಚ್ಚೆಯನ್ನು ಸರಿಪಡಿಸಿಕೊಳ್ಳುತ್ತ ರುಕ್ಕಿಣಿಯ ಕೋಣೆಯಿಂದ ಹೊರನಡೆದ ಕೃಷ್ಣಶಾಸ್ತ್ರಿಗಳು ಬಿಚ್ಚಿಹೋದ ತಮ್ಮ ಸಂಯಮದ ಗಂಟನ್ನು ಮತ್ತೊಮ್ಮೆ ಸರಿಪಡಿಸುವ ಯತ್ನದಲ್ಲೆ ಇಡೀ ರಾತ್ರಿಯನ್ನು ಕಳೆದರು. ನಾನು ಎಂಥ ಪಾಪ ಮಾಡಿದೆ, ಎಂಥ ಪಾಪ ಮಾಡಿದೆ ಎಂದು ಹಲುಬುತ್ತ ಕಣ್ಣೀರಿಟ್ಟರು. ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹೊರಳುವರು. ಎದ್ದು ಕೂರುವರು. ಮಲಗುವರು. ಏಳುವರು. ಮತ್ತೆ ಮಲಗುವರು... ಉರಿ, ಉರಿ, ಉರಿ... ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿದ್ದರು....ರುಕ್ಕಿಣಿ ತನ್ನ ಮಗನ ಹೆಂಡತಿ! ಮಗಳಿಗೆ ಸಮಾನವಾದವಳು!- ಛೇ, ಎಂಥ ಹೇಸಿಗೆ ಕೆಲಸ ಮಾಡಿಬಿಟ್ಟೆ?... ಛೇ, ಛೇ, ಛೇ ಐವತ್ತು ವರ್ಷಗಳಿಗೂ ಮಿಕ್ಕಿದ ನನ್ನ ಸಂಯಮದ ಪುಣ್ಯವನ್ನು ಕೇವಲ ಕ್ಷಣಗಳ ಲಾಲಸೆಗೆ ಕ್ಷಯಮಾಡಿದೆನಲ್ಲ?- ಎಂಥ ಅವಿವೇಕ?... ಅಯ್ಯೋ, ಒಟ್ಟಿನಲ್ಲಿ ದೈವ ಕೈಬಿಟ್ಟಿತು; ಅದರಿಂದಲೇ ಮನಸ್ಸು ಕೈಕೊಟ್ಟಿತು. ಹೆಂಡತಿ ಸತ್ತ ದಿನವೇ ನನ್ನ ಕಾಮವೂ ಸತ್ತುಹೋಯಿತೆಂದೂ ನಾನು ಅತಿಶಯವಾಗಿ ಮೋಹಿಸಿದ್ದ ಆ ಪಾರ್ಥಿ ಶರೀರವನ್ನು ಕಟ್ಟಿಗೆಯೊಟ್ಟಿ ಸ್ಮಶಾನದಲ್ಲಿ ಸುಟ್ಟ ದಿನವೇ ನನ್ನಲ್ಲಿ ತುಂಬಿದ್ದ ಕಾಮವನ್ನೂ ಸುಟ್ಟೆನೆಂದು ಭ್ರಮಿಸಿದ್ದೆನಲ್ಲ?... ಶಿವ ಸುಟ್ಟರೂ ಕಾಮದೇವ ಅನಂಗನಾದನೆಂದು ಪುರಾಣಗಳು ಸಾರುತ್ತವೆ... ನಾನು ಆ ದಿನವೇ ನನ್ನ ವಿಷಯಾಸಕ್ತಿಗಳನ್ನೆಲ್ಲ ಸುಟ್ಟೆನೆಂದು ವಿಜೃಂಭಿಸಿದ್ದು ಹುಸಿಯಾಯಿತಲ್ಲ!... ಇನ್ನು ಯಾವುದಕ್ಕಾಗಿ ಅಹಂಕಾರ ಪಡಬೇಕು?~ ಎಂದುಕೊಳ್ಳುತ್ತಿರುವಂತೆಯೆ, ಇನ್ನು ಯಾತಕ್ಕಾಗಿಯಾದರೂ ನಾನು ಬದುಕಬೇಕು ಎಂಬ ಭಾವನೆಯೂ ಸುಳಿದು ಹೋಯಿತು. ಛೇ, ಛ, ಆತ್ಮಹತ್ಯೆ ಮಹಾಪಾತಕ, ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಜಿಗಿಯುವುದೆ?... ಎದ್ದರು. ಒಳಗೊಳಗೇ ಅಳುತ್ತ ತೋಟಕ್ಕೆ ನಡೆದರು. ಮೊದಲು ಹೆಂಡತಿಯನ್ನು ಸುಟ್ಟ ಜಾಗದಲ್ಲಿ ಏಳಿಸಿದ್ದ ಮಲ್ಲಿಗೆ ವನದ ಮುಂದೆ ನಿಂತು ಗೋಳುಗರೆದರು... ತಮಗೆ ವಾಂತಿ, ಭೇದಿ ಆದಾಗ, ತಾವು ಬೇಡ ಬೇಡ