ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೮ ವೈಶಾಖ “ಅದೆಲ್ಲ ಸರಿ, ಆದರೆ ನಾವೇನು ಪಾಪ ಮಾಡಿದೆವು ಎಂದು ನಮ್ಮ ಕಂದನ್ನ ಕಿತ್ತುಕೊಂಡಿತು ವಿಧಿ?” ಎಂದು ಕಂಬನಿಗರೆದಿದ್ದಳು... ಮೊದಲ ಶಿಶು ಮರಣ ಹೊಂದಿದ್ದು ನಾಗವೇಣಿಯ ಆರೋಗ್ಯ ಮೇಲೆ ಭಯಂಕರ ಪರಿಣಾಮ ಬೀರಿತು. ಅತಿಯಾಗಿ ಕೊರಗಿದ ಪರಿಣಾಮವಾಗಿ, ಅವಳಿಗೆ ಬಾಣಂತಿ ನಂಜಾಯಿತು. ಗುಣವಾಗಲು ಮೈಸೂರಿನ ಆಸ್ಪತ್ರೆಯನ್ನೆ ಸೇರಬೇಕಾಯಿತು. ಗುಣವಾಗಿ ಮನೆಗೆ ಮರಳುವಾಗ ತೌರಿನಿಂದ ತಂಗಿ ಶಕೂ ಕೂಡ ಬಂದಿದ್ದಳು. ಶಕುಂತಲ ಚೆಲ್ಲಾಟದ ಹುಡುಗಿಯಲ್ಲದಿದ್ದರೂ ಇಪ್ಪತ್ತು ಇಪ್ಪತ್ತೊಂದರ ಉಕ್ಕುವ ಹರೆಯದ ಯುವತಿ. ನನಗೂ ಒಳ್ಳೆಯ ಪ್ರಾಯ. ಅವಳು ಮನೆಗೆ ಮರಳಿ ಇನ್ನೂ ನೆಟ್ಟಗೆ ಹದಿನೈದು ದಿನಗಳೂ ಕಳೆದಿಲ್ಲ. ನಾಗು, ರಾತ್ರಿಯ ವೇಳೆ ನನ್ನನ್ನು ಗೋಪ್ಯವಾಗಿ ಕರೆದು “ಶಕೂ ನಾಳೆ ಅವಳ ಊರು ಅಗ್ರಹಾರಕ್ಕೆ ಹೋಗ್ತಾಳೆ” ಎಂದಾಗ, ನಾನು ಬೆರಗಾಗಿ, “ಯಾಕೆ?” ಎಂದೆ. “ಬೆಂಕಿ, ಬೆಣ್ಣೆ ಎರಡೂ ಒಂದೇ ಸ್ಥಳದಲ್ಲಿ ಇರುವುದು ಯುಕ್ತವಲ್ಲ. ನಾಳೆ ಗಾಡಿ ಕಟ್ಟಿಸಿ, ಮೊದಲು ಅವಳನ್ನು ಸಾಗಹಾಕಿ. “ಕಡ್ಡಿ ಮುರಿದಂತೆ ಹೇಳಿದ್ದಳು. ಆ ಪ್ರಕಾರ ಮಾರನೆ ದಿನವೆ ಶಕುಂತಲ ಅವಳ ಊರಿಗೆ ಪ್ರಯಾಣ ಬೆಳಸಿದ್ದಳು... ನಾಗವೇಣಿ ಹಾಗೆ ಮಾಡಿದ್ದು ತಪ್ಪು ಎಂದು ಹೇಳಲು ನನಗೆ ಯಾವ ಧೈರ್ಯ?- ಯಾರಿಗೆ ಗೊತ್ತು?- ಇನ್ನು ಕೆಲಕಾಲ ಶಕೂ ನಮ್ಮೊಡನೆಯೆ ಇದ್ದಿದ್ದರೆ, ಏನಾಗುತ್ತಿತ್ತೊ?... ಈ ಇಳಿವಯಸ್ಸಿನಲ್ಲಿ ಎಡವಿದ ನಾನು, ಆ ಪ್ರಾಯದಲ್ಲಿ ಎಡವುತ್ತಿರಲಿಲ್ಲ ಎಂದು ಯಾವ ಧೈರ್ಯದಿಂದ ಹೇಳಲಿ?... ನಾಗು, ಧರ್ಮದೇವತೆಯಾಗಿ ಆಗ ನನ್ನನ್ನು ನೀನು ಕಾಪಾಡಿದೆ. ಇಂದು ನೀನು ಬದುಕಿದ್ದಲ್ಲಿ ನಿಶ್ಚಯವಾಗಿಯೂ ಈ ಪತನದಿಂದ ನನ್ನನ್ನು ಪಾರು ಮಾಡುತ್ತಿದ್ದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ನಾಗು, ನಿನಗೆ ಪ್ರಮಾಣ ಮಾಡಿ ಹೇಳೇನೆ: “ಇನ್ನು ಮುಂದೆ ಎಂದೆಂದೂ ಹೀಗೆ ತಪ್ಪು ಮಾಡಲ್ಲ, ಖಂಡಿತ ಮಾಡಲ್ಲ. ದಯಮಾಡಿ ನನ್ನನ್ನು ನಂಬು” –ಥಟ್ಟನೆ ಚಾಟಿ ಏಟಿನಂತೆ ಯಾರೊ ಅಂದರು: ಊರೆಲ್ಲ ಸೂರೆಹೋದನಂತರ...! ಅದು ತಮ್ಮ ಹೆಂಡತಿಯ ಧ್ವನಿಯೊ ಅಥವಾ ತಮ್ಮೊಳಗಿನಿಂದಲೆ ಮೂಡಿದ ಮಾತೊ? ಕಣ್ಣೀರು ಒರೆಸಿಕೊಳ್ಳುತ್ತ, ಅಲ್ಲಿಂದ ಎದ್ದರು. ಮಗನನ್ನು ಸುಟ್ಟ ಜಾಗಕ್ಕೆ ಹೋದರು. ಕಣ್ಣೀರು ಮತ್ತೆ ಚೆಲ್ಲನೆ ಒಡೆಯಿತು. ಎರಡು ಕೆನ್ನೆಗಳನ್ನೂ ಒದ್ದೆ ಮಾಡಿ ಹರಿಯಿತು... ಕಣ್ಣೀರು ಸುರಿಸುತ್ತಿರುವಂತೆಯೆ ಎಳೆಬಿಸಿಲಿಗೆ ಹಸಿರನ್ನು