ಪುಟ:ವೈಶಾಖ.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೦೩ ಅನುಭವಿಸಿದ ರತಿಸುಖವನ್ನು ಎಂದೋ ಮರೆತು ಸಂಯಮಶೀಲೆಯಾಗಿದ್ದವಳನ್ನು ಹಿಂದಿನ ರಾತ್ರಿಯ ಅನುಭವ ಕೆದಕಿ ಬೆದಕಿ ಮನಃ ಪ್ರಚೋದಿಸಿದಂತಿತ್ತು. ಯಾಕೊ ಸೆಖೆಯಾದಂತಾಯಿತು. ವಿಪರೀತ ಸೆಖೆ, ಹಾಸಿಗೆ ಬಿಟ್ಟಿದ್ದಳು. ಎದ್ದು ಹಜಾರಕ್ಕೆ ಬಂದಳು. ಮೂಲೆಯ ಮಾಮೂಲು ಜಾಗದಲ್ಲಿ ಶಾಸ್ತ್ರಿಗಳು ಆರಾಮವಾಗಿ ಕಾಲು ಚಾಚಿ ಅಂಗಾತ ಮಲಗಿ ಗಾಢನಿದ್ರೆಯಲ್ಲಿದ್ದರು. ಕೆಲನಿಮಿಷ ಅವರನ್ನೇ ನಿಟ್ಟಿಸುತ್ತಿದ್ದು, ಮೆಲ್ಲನೆ ಮುಂಬಾಗಿಲು ತೆರೆದು, ಜಗಲಿಗೆ ಹೋದಳು. ಅಲ್ಲಿ ಅತ್ತಿಂದಿತ್ತ ಶತಪಥಕ್ಕೆ ಆರಂಭಿಸಿದಳು. ಹೊರಗೂ ಗಾಳಿಯ ಸುಳಿವಿಲ್ಲ. ಉಬ್ಬಸ ಬರಿಸುವಂತಹ ಸೆಕೆ!... ಬಾಗಿಲು ಮುಚ್ಚಿ ಬಂದು ಮತ್ತೆ ಮಲಗಿದಳು. ಎಷ್ಟು ಪ್ರಯತ್ನಿಸಿದರೂ ನಿದ್ರೆಬಾರದು. ಕುರಿಗಳನ್ನು ಎಣಿಸಿದರೆ ನಿದ್ರೆ ಬರುವುದೆಂದು ಯಾರೋ ಹೇಳಿದ್ದ ನೆನಪು. ಆ ಪ್ರಕಾರ, ಒಂದು ಎರಡು ಮೂರು... ಕುರಿ ಎಣಿಸಲು ಉದ್ಯುಕ್ತಳಾದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು ರವಿಕೆಯ ಒಳಗೆ ಬೆವರು ಸುರಿದು ಒದ್ದೆಯಾಗಿತ್ತು. ಎದ್ದು ಕುಳಿತಳು. ರವಿಕೆಯ ಗುಂಡಿಗಳನ್ನು ಬಿಚ್ಚಿ ಸೀರೆಯ ಸೆರಗಿನಿಂದ ಎದೆಯ ಭಾಗವನ್ನೂ ಕಂಕುಳನ್ನೂ ಒರಿಸಿದಳು. ಪುನಃ ಹಾಸಿಗೆಯ ಮೇಲೆ ಉರುಳಿದಳು. ಎಣ್ಣೆ ತೀರಿಹೋಗಿ ಮೂಲೆಯಲ್ಲಿದ್ದ ದೀವಿಗೆಯ ಕುಡಿ ನಂದಿಹೋಗಿತ್ತು. ಎದ್ದು ಹೋಗಿ ನಡುಮನೆಯಿಂದ ಎಣ್ಣೆ ತಂದು ದೀಪ ಉರಿಸಲು ಯಕೊ ಬೇಸರವಾಯಿತು. ಕತ್ತಲೆಯಲ್ಲೇ ಕಣ್ಣು ಬಿಟ್ಟು ನೋಡುತ್ತಿದ್ದಳು. ಮನಸಡ್ಡು ಬರಿದೆ ಬರಿದು, ನಿರ್ಭಾವದಿಂದ ಕತ್ತಲೆಯಲ್ಲಿ ನೋಟವನ್ನು ನೆಟ್ಟಳು. ಕತ್ತಲೆಯ ದಟ್ಟವಾದ ಕಪ್ಪು ಅಲೆಅಲೆಯಾಗಿ ಬಂದು ಕಣ್ಣುಗಳಿಗೆ ಮೆತ್ತಿದಂತಾಯಿತು. ರೆಪ್ಪೆಗಳು ತಾವೇತಾವಾಗಿ ಮುಚ್ಚಿದವು. ಪೂರ್ಣ ನಿದ್ರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ಮನಸ್ಸು ತೇಲಿತು. ಒಂದು ಹಗಲು, ಗಂಡನೊಡನೆ ತೋಟಕ್ಕೆ ಹೋಗಿದ್ದಳು. ವಿವಾಹದ ಆರಂಭದ ದಿನಗಳು. ಇಬ್ಬರ ಹೆಜ್ಜೆಹೆಜ್ಜೆಯಲ್ಲೂ ಸಂಭ್ರಮ ಇಟ್ಟಾಡುತ್ತಿತ್ತು. ಸೀಬೆಹಣ್ಣು ತಿಂದು, ಎಳನೀರು ಕುಡಿದರು. “ಬೆಟ್ಟದ ಕಡೆ ಸುತ್ತಾಡಿ ಬರೋಣವೆ?” ವಿಶ್ವೇಶ್ವರ ಕೇಳಿದ್ದೇ ತಡ, ರುಕ್ಕಿಣಿ ಉತ್ಸಾಹದಿಂದ ಒಪ್ಪಿದ್ದಳು. ಊರಿನ ಮೇಗಡೆ ಪಶ್ಚಿಮಕ್ಕಿದ್ದ ಕುಂತಿಬೆಟ್ಟವನ್ನು ದಂಪತಿಗಳಿಬ್ಬರೂ ಚಿಮ್ಮಿ ಚಿಮ್ಮಿ ಜಿಗಿದಾಡುತ್ತ ಏರಿದ್ದರು. ಆಗ ಶಿವರಾತ್ರಿಯ ಕಾಲ. ಕಾಡಿನ ಗಿಡಮರಗಳ ಮೇಲೆ ಅಲ್ಲಲ್ಲಿ ಬಣ್ಣ ಬಣ್ಣದ ಹೂಗಳ ಸಂತೆ. ವಿಶ್ವೇಶ್ವರ ಒಂದು ಬೆಟ್ಟ ದಾವರೆ ಹೂವನ್ನು ಕಿತ್ತುತಂದ. ಅಂಗೈ