ಪುಟ:ವೈಶಾಖ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೪ ವೈಶಾಖ ಅಗಲದ ಹೂವು, ಅರಿಶಿನವನ್ನೇ ಅದಕ್ಕೆ ಲೇಪಿಸಿದಂತಿತ್ತು. ನೋಡಲು ಬಲು ಮೋಹಕವಾದ ಆ ಹೂವನ್ನು ವಿಶ್ವೇಶ್ವರ ರುಕ್ಕಿಣಿಯ ಮಂಡೆಗೆ ಮುಡಿಸಿ ಅವಳನ್ನು ಹೊರಳಿಸಿ ಹೊರಳಿಸಿ ನೋಡಿ ಸುಖಿಸುತ್ತಿದ್ದಂತೆ ರುಕ್ಕಿಣಿಯು ಎತ್ತ ತಿರುಗಿದರತ್ತ ಕಣ್ಣು ತುಂಬುತ್ತಿದ್ದ ಕಡುಗೆಂಪಿನ ಮುತ್ತುಗದ ಹೂಗಳನ್ನು ನೋಡುತ್ತ ಪುಳಕಗೊಳ್ಳುತ್ತಿದ್ದಳು... ಹೀಗೆ ಅವರಿಬ್ಬರೂ ಸರಸ ಸಲ್ಲಾಪವಾಡುತ್ತ ಮುಂದೆ ಸಾಗಿದ್ದರು. ಹೆಜ್ಜೆ ಹೆಜ್ಜೆಗೂ ಘಮಘಮಿಸುವ ಯಾವುದೊ ಅಪರೂಪದ ಪರಿಮಳ ಅಲ್ಲಿನ ವಾತಾವರಣವನ್ನೆಲ್ಲ ತುಂಬಿದಂತಿತ್ತು. ರುಕ್ಕಿಣಿ ತಡೆದು ನಿಂತು, “ಅಬ್ಬಬ್ಬ, ಇದೆಂಥ ಸುವಾಸನೆ...” ಎಂದು ಆನಂದಿಸಿದಳು. “ಈ ಪರಿಮಳ ಜಾಲಿ ಹೂವಿನದ್ದು, ರುಕ್ಕು... ಇದರ ಘಮನ ಗಾಳಿ ಬೀಸುತ್ತಿರುವಾಗ ಸುಮಾರು ಒಂದು ಒಂದೂವರೆ ಮೈಲಿ ಫಾಸಲೆಗೂ ಹರಡುತ್ತೆ...” ಎಂದು ವಿಶ್ವೇಶ್ವರ ವಿವರಿಸಿದ್ದ. - ರುಕ್ಕಿಣಿಯು ಆ ಸುವಾಸನೆಯನ್ನು ಹೀರುತ್ತಲೇ ಪತಿಯ ಜೊತೆಗೆ ಬೆಟ್ಟವನ್ನೇರಿ, ಅದರ ನೆತ್ತಿಗೆ ಬಂದಿದ್ದಳು. ಬೆಟ್ಟದ ನೆತ್ತಿಯ ವಿಸ್ತಾರ ಪ್ರದೇಶದ ಉತ್ತರ ಭಾಗದಲ್ಲಿ ಒಂದು ಕೋಟೆ. ಅದು ದೃಷ್ಟಿಗೆ ಬಿದ್ದೊಡನೆಯೆ, “ಇದೇ ಏನ್ರಿ, ನಮ್ಮ ಊರಿನ ಮಂದಿ ಮಾತಾಡಿಕೊಳ್ತಾರಲ್ಲ- ಆ ಚಿತ್ರ ಮೂಲನ ಕೋಟೆ?” ಎಂದು ವಿಶ್ವೇಶ್ವರನನ್ನು ಕೇಳಿದ್ದಳು ರುಕ್ಕಿಣಿ. “ಹೌದು, ಇದೇ ದ್ರೋಣಾಚಾರ್ಯರು ಕುರುಕ್ಷೇತ್ರದ ಯುದ್ದಕ್ಕೂ ಮುನ್ನ ದಕ್ಷಿಣಾಪಥಕ್ಕೆ ಬಂದಿದ್ದಾಗ ನಿರ್ಮಿಸಿದ ಚಿತ್ರಮೂಲನ ಕೋಟೆ, ಮುಂದೆ ಕುರುಕ್ಷೇತ್ರದ ಮಹಾಸಮರದಲ್ಲಿ ದುರ್ಯೋಧನನ ಸೈನ್ಯಕ್ಕೆ ಸೇನಾನಿಯಾಗುವ ಸಂಭವ ಬಂದಾಗ, ತಾವು ತಮ್ಮ ಅಧೀನದ ಸೇನಾತುಕಡಿಗಳನ್ನು ಉಪಯೋಗಿಸಿ ರಚಿಸಬೇಕೆಂದಿದ್ದ ಚಕ್ರವ್ಯೂಹದ ಒಂದು ಪ್ರಯೋಗ, ರಾಜಧಾನಿ ಹಸ್ತಿನಾಪುರದಿಂದ ಸಹಸ್ರಾರು ಮೈಲಿಯಾಚೆಗಿರುವ ಈ ದುರ್ಗಮ ತಾಣದಲ್ಲಿ ಈ ಚಿತ್ರ ಮೂಲನ ಕೋಟೆಯನ್ನು ನಿರ್ಮಿಸಿ, ಪರೀಕ್ಷೆ ನಡೆಸಿದರೆಂದು ಜನಜನಿತವಾದ ಮತ್ತು....” ವಿಶ್ವೇಶ್ವರ ತನ್ನ ಮಡದಿಗೆ ವಿವರಿಸುತ್ತ ಸಾಗಿದಂತೆ, ಜೀರ್ಣವಾಗಿ ಸಂದಿ ಗೊಂದಿಗಳಲ್ಲಿ ಪಾಚಿ ಹಾಗೂ ಗಿಡಗಳನ್ನು ಬೆಳೆದಿದ್ದರೂ ಇನ್ನೂ ಬಲಶಾಲಿಯಾಗೇ ಕಾಣುವ ಕೋಟೆಯನ್ನು ನೋಡಿ ರುಕ್ಕಿಣಿ ಬೆರಗಾದಳು. ಕೋಟೆಯೊಳಗೆ ಏನಿದೆಯೊ ನೋಡಬೇಕೆಂಬ ಕುತೂಹಲ ಉಂಟಾಯಿತು.