________________
ಬೊಗಳಾದೆ ಕೆಲ್ಲ!”
“ನಾನು ಯಾಕೆ ಕೇಳಿದೆ ಅಂದರೆ, ಚಿರತೆಯೊ ಹುಲಿಯೊ ಮೆಳೆ ಪಕ್ಕದಲ್ಲಿ ಬರಿರಬಹುದೇನೋ ಅಂತ ಸಂದೇಹ ಬಂತು- ಅದಕ್ಕೆ”
“ಊ, ಈ ಕಾಡಲ್ಲಿ ಹುಲಿ, ಚಿರತೆಗೇನು ಕಮ್ಮಿ. ಬಂದರೂ ಬರಬೈದು. ಬೆಳ್ಳಗಿರೊ ಎತ್ತುಗಳ ಕಂಡು ಆವಕೆ ಆಸೆ ಆಗ್ಗೆ ಇರಾದಾ, ನೀವೇ ಯೋಳಿ... ಆದ್ರೆ ಇಂಗೆ ಮೆಳೆ ಇಂದ್ರೆ ಸದ್ದ ಮಾಡಿರೋದು ಒಂದು ಉಡ ಆಗಿರಬೈದು, ಒಂದು ಕೀರ ಆಗಿರಬೈದು, ಇನ್ನೇನಾರೂ ಆಗಿರಬೈದು...” ಎಂದು ಮಾತು ನಿಲ್ಲಿಸಿ “ಉಚ್, ಉಚ್' ಎನ್ನುತ್ತ ಎತ್ತುಗಳನ್ನು ಚುರುಕುಗೊಳಿಸಿದ.
ಮುಂಜಾವಿನಲ್ಲಿ ದರುಮನಳ್ಳಿ ಬಿಟ್ಟು ಹೊರಡುವಾಗಲೆ ಹೆಪ್ಪುಗಟ್ಟಿದ್ದ ಮೋಡ ಸಣ್ಣಗೆ ಮಳೆಗರೆಯಲ್ಲಾರಂಭಿಸಿತು. ಕ್ರಮೇಣ ಅದರ ರಭಸ ಹೆಚ್ಚುತ್ತ ಹೋಯಿತು. ಗಾಳಿಯೂ ಜೋರಿನಿಂದ ಬೀಸುತ್ತಿದ್ದು ಬಂಡಿಯ ಹಿಂದುಗಡೆ ಕುಳಿತ ರುಕ್ಕಿಣಿಯು, ಮಳೆಯ ಎರಚಲಿನಿಂದ ತಪ್ಪಿಸಿಕೊಳ್ಳಲು ಗಾಡಿಯ ಹಿಂದಿನಿಂದ ಮೇಲೆ ಸರಿಯುತ್ತ ಹೋಗಬೇಕಾಯಿತು.
ಹೊರಡುವಾಗ ಅಸಾಧ್ಯ ಸೆಕೆಯಿದ್ದುದರಿಂದ ಲಕ್ಕ ಅಂಗಿ ಬಿಚ್ಚಿ ಮೊಣಕಾಲಿನವರೆಗೂ ಸುತ್ತಿದ್ದ ತುಂಡು ದಟ್ಟಿ ಪಂಚೆಯಲ್ಲೇ ಕುಳಿತು ಗಾಡಿ ಹೊಡೆಯುತ್ತಿದ್ದ ಒಮ್ಮೊಮ್ಮೆ ಕಣ್ಣು ಕೋರೈಸುವಂತೆ, ಬಾನಿನಲ್ಲಿ ಮಿಂಚು ಕವಲು ಕವಲಾಗಿ ಬೆಳಗುವುದು. ಆಗ ಅವನ ತೆರೆದ ಕಪ್ಪು ಮಯ್ಯ ನುಣುಪಾದ ಕಪ್ಪುಶಿಲೆಯಂತೆ ಥಳಥಳ ಹೊಳೆಯುವುದು, ಮಳೆಯ ಹನಿ ಮುತ್ತಿನ ಮಣಿಗಳಂತೆ ಅವನ ದೇಹದ ಮೇಲೆ ಚೆಲ್ಲಿದಾಗ, ಅದು ಚಿರತೆಯ ಮೈಯಂತೆ ಮಿರುಗುವುದು. ಅವನ ಮೈಯನ್ನೆ ಗಮನಿಸಿದಂತೆ, ರುಕ್ಕಿಣಿಯ ಅಂತರಾಳದಲ್ಲಿ ಹಿಂದೆ ಇಂಥದೇ ಗಾಡಿ ಪ್ರಯಾಣದಲ್ಲಿ, ರುದ್ರಪಟ್ಟಣದಿಂದ ಬರುತ್ತಿದ್ದಂತೆ ಕಳ್ಳುರು ಮೇಲೆರಗಿದಾಗ, ಲಕ್ಕ ಜೀವದ ಹಂಗುದೊರೆದು ಹೋರಾಡಿದ ಘಟನೆ ನೆನಪಾಗಿ ಅವನ ಬಗ್ಗೆ ಅಭಿಮಾನ ಉಕ್ಕಿತು.
ಮುಂಭಾಗದಲ್ಲಿ ಮಳೆಯ ಎರಚಲು ಕಡಿಮೆ ಆದರೂ ಮಳೆಯ ಹನಿಗಳು ಮೈ ಮೇಲೆ ಬಿದ್ದಾಗ, ಲಕ್ಕನಿಗೆ ಎಲ್ಲಿಲ್ಲದ ಖುಷಿ!... ಮಳೆಯಲ್ಲಿ ನೆನೆಯುವುದೆಂದರೆ ಬಾಲ್ಯದಿಂದಲೂ ಲಕ್ಕನಿಗೆ ಆನಂದವೆ. ಈಗಲೂ ಕೂಡ ಮಳೆ ಹನಿಹನಿಯಾಗಿ ಮೈ ಮೇಲೆ ಎರಚುತ್ತ ಬಂದಾಗ, ಮಗುವಿನಂತೆ ಅವನು ಕುಲುಕುವುದನ್ನು ರುಕ್ಕಿಣಿಯು ಗಮನಿಸಿದಳು. ಆದರೆ ಮಳೆಯಲ್ಲಿ ಎತ್ತುಗಳ ನಡೆ ಮಾತ್ರ ಮಂದವಾಯಿತು.