________________
೨೩೮ ವೈಶಾಖ ವೆಂಕಟಕೃಷ್ಣಯ್ಯನವರಂತೆ ತಮ್ಮ ಬದುಕಿಗೆ ಎಂದೂ ಊರಿನ ವ್ಯವಹಾರಗಳನ್ನು ಅಂಟಿಸಿಕೊಂಡವರಲ್ಲ. ತಮ್ಮ ತೋಟ, ತುಡಿಕೆ, ತಮಗೆ ರೈತರಿಂದ ಬರಬೇಕಾದ ಪೋಟಿಕೆ, ಮಸಿಕುಡಿಕೆ ಹಣ, ಜೊತೆಗೆ ರೈತಾಪಿ ಜನ ತಂದುಕೊಡುವ ಬೆಣ್ಣೆ, ಜೇನುತುಪ್ಪ, ಆಯಾ ಕಾಲದಲ್ಲಿ ದೊರೆಯುವ ಹಲಸಿಹಣ್ಣು, ಮಾವಿನಹಣ್ಣು. ಸೀಬೆಹಣ್ಣು, ಉಪ್ಪಿನಕಾಯಿ ಹಾಕಲು ಅಮಟೆಕಾಯಿ, ಬೆಟ್ಟದ ನೆಲ್ಲಿಕಾಯಿಇತ್ಯಾದಿ ಮಾಮೂಲುಗಳಲ್ಲಿ ಆಸಕ್ತಿ ವಿನಾ, ಊರಿನ ಆಗುಹೋಗುಗಳಲ್ಲಿ ಸಾಮಾನ್ಯವಾಗಿ ಅವರು ನಿರ್ಲಿಪ್ತರು. ಅಂದರೆ ಊರಿನಲ್ಲಿ ಏನೇ ಅವ್ಯವಹಾರ ನಡೆದರೂ ಉಪಾಯವಾಗಿ ಯಾವ ಏಟಿಗೂ ಸಿಕ್ಕದೆ 'ರಾಮಾ ಸ್ವಸ್ತಿ, ರಾವಣಾ ಸ್ವಸ್ತಿ' ಎಂದು ಜಾರಿಕೊಳ್ಳುವ ಸ್ವಭಾವದ ವ್ಯಕ್ತಿ.... ಈ ಊರಿನಲ್ಲಿ ನಾವು ಬ್ರಾಹ್ಮಣರು ಇರುವುದು ಕೆಲವೇ ಜನ. ಇಲ್ಲಿ ಲಿಂಗಾಯಿತರು, ಒಕ್ಕಲಿಗರು, ಕುರುಬರು, ಪರಿವಾರದವರು, ಕುಂಬಾರರು ಇತ್ಯಾದಿ ಇತರೇ ಕೋಮಿನವರದೇ ಪ್ರಾಬಲ್ಯ. ಆದ್ದರಿಂದ ತಾವು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ಅದು ಸಾಧ್ಯವಾಗದಿದ್ದಲ್ಲಿ ಎಲ್ಲರಿಂದಲೂ ಆದಷ್ಟು ದೂರ ಇದ್ದಬಿಡುವುದು ಕ್ಷೇಮ ಎಂದು ತೀರ್ಮಾನಿಸಿದ್ದರು. ಆದರೆ ಇಂದು ಅವರು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದ ಸಂದರ್ಭ ಒದಗಿ ಬಂದಿತ್ತು. ಸಬ್‌ಇನ್‌ಸ್ಪೆಕ್ಟರ್ ಗೂಳಪ್ಪ ಒಬ್ಬ ಪೇದೆಯೊಡನೆ ಬಂದು ತಮ್ಮ ಮನೆಯ ಜಗುಲಿಯ ಮೇಲೆಯೇ ಪ್ರತಿ ಸ್ಥಾಪಿತರಾಗಿರುವರೆಂದೂ ತಮ್ಮನ್ನು ಜಾಗ್ರತೆ ಕರೆತರಲು ಹೇಳಿರುವುದೆಂದೂ ಪಟೇಲ ನಿರ್ವಾಣಯ್ಯ ತೋಟಕ್ಕೆ ಬಂದು ಸುದ್ದಿ ಮುಟ್ಟಿಸಿದಾಗ, ಸೀತಾರಾಮಯ್ಯನವರ ಶ್ಯಾನಭೋಗ ಬುದ್ದಿಗೆ ಮಂಕು ಕವಿದಂತಾಯಿತು. ಈ ಸಂದಿಗ್ಧದಿಂದ ಹೇಗೆ ಪಾರಾಗುವುದೆಂದು ತರ್ಕಿಸುತ್ತಲೆ ಬಂದರು. ಶ್ಯಾನುಭೋಗರು ಪಟೇಲನ ಸಂಗಡ ತಮ್ಮ ಮನೆಯ ಬಳಿ ಬಂದಾಗ, ಗೂಳಪ್ಪನಾಗಲೆ ತನ್ನ ಪೇದೆಯನ್ನು ಕಳಿಸಿ ಊರಿನ ಯಜಮಾನ್ತುರನ್ನು ಕಲೆ ಹಾಕಿ, ತನಿಖೆಗೆ ಆರಂಭಿಸಿದ್ದ. ಆಗಾಗ ಹುಷಾರು ತಪ್ಪುತ್ತಿದ್ದ ಕುಳವಾಡಿ ಕುಂದೂರಯ್ಯನಿಗೆ ಆ ದಿವಸವೂ ಆರೋಗ್ಯ ಕೆಟ್ಟು, ತನ್ನ ಪರವಾಗಿ ಲಕ್ಕನನ್ನೆ ಕಳಿಸಿದ್ದುದರಿಂದ, ಲಕ್ಕನೂ ಜಗಲಿಗೆ ಅಷ್ಟು ದೂರದಲ್ಲಿ ನಿಂತಿದ್ದ. ಶ್ಯಾನುಭೋಗರು ಬಂದವರೇ, “ಇನ್ ಸ್ಪೆಕ್ಟರ್ ಸಾಹೇಬರಿಗೆ ನಮಸ್ಕಾರ. ಯಾವಾಗ ದಯಾಮಾಡಿಸೋಣವಾಯ್ತು?” ಎಂದು ಕೈ ಜೋಡಿಸುತ್ತ, ದೇಶಾವರಿ ನಗು ನಕ್ಕು, “ಅಯ್ಯಯ್ಯೋ, ಇದೇನು- ಸಾಹೇಬರನ್ನ ಚಾಪೆ ಮೇಲೆ ಕೂರಿದೀರಲ್ಲ?” ಎನ್ನುತ್ತ, ಗೂಳಪ್ಪ ಬೇಡ ಬೇಡವೆಂದರೂ ಕೇಳದೆ, ಮನೆಯ ಒಳಗಿನಿಂದ