________________
ಸಮಗ್ರ ಕಾದಂಬರಿಗಳು ೨೩೯ ತಾವೇ ಕುರ್ಚಿಯನ್ನೆತಿ ತಂದು, “ತಾವು ಇಲ್ಲಿ ಇಲ್ಲಿ ಮುಹೂರ್ತ ಮಾಡ ಬೇಕು” ಎಂದು ವಿನೀತರಾಗಿ ಬಿಸಿದರು, ಗೂಳಪ್ಪ ಈ ಠಕ್ಕು ಉಪಚಾರಕ್ಕೆ ತಾನು ಬಲಿಬೀಳುವ ಪ್ರಧೃತಿಯಲ್ಲ ಎಂದುಕೊಳ್ಳುತ್ತ, ಹೊರಗೆ ಪ್ರಕಟವಾಗಿ ಯಾವ ಭಾವವನ್ನೂ ತೋರದೆ, ಎದ್ದು ಕುರ್ಚಿಯ ಮೇಲೆ ಠೀವಿಯಿಂದ ಕುಳಿತು, ಒಂದು ಕಾಲನ್ನೆತ್ತ ಇನ್ನೊಂದರ ಮೇಲಿಟ್ಟು ಅಲ್ಲಾಡಿಸುತ್ತ, ತನ್ನ ಕೈಕೋಲನ್ನು ತೋಡೆಯ ಮೇಲಿಟ್ಟು ಅಟ್ಟಣಿಗೆಯಂತೆ ಎರಡೂ ಹಸ್ತಗಳಿಂದ ಅದನ್ನು ಹಿಡಿದು, ಚಪಾತಿ ಒತ್ತುವಂತೆ ಹಿಂದೆ ಮುಂದೆ ಆಡಿಸುತ್ತ. “ಇದೇನು ಶ್ಯಾನುಭೋಗರೆ, ಊರಲ್ಲಿ ನೀವು, ಪಟೇಲರು, ಇಂಥಿಂಥ ಯಜಮಾನರು, ಎಲ್ಲರೂ ಇದ್ದು ಕೂಡ, ಇಂಥ ಅಚಾತುರ್ಯ ನಡೆಯೋಕೆ ಅವಕಾಶ ಕೊಟ್ಟಿರಿ?” ಪ್ರಶ್ನಿಸಿದ. - “ಅಚಾತುರ್ಯ?... ಏನು ಸ್ವಾಮಿ ತಾವು ಹೇಳಿರೋದು?- ನನಗೆ ಅರ್ಥ ಆಗ್ತಿಲ್ಲ” ಎಂದು ನಶ್ಯ ಏರಿಸುತ್ತ, ಯಜಮಾನರ ಕಡೆ ನೋಡುತ್ತ ಹೇಳಿದರು. “ಶ್ಯಾನುಭೋಗರೆ, ನೀವು ಹಿಂದೆ ಎಲ್ಲಾದರೂ ನಾಟಕದಲ್ಲಿ ಪಾರ್ಟುಮಾಡಿದ್ದಿರೇನ್ರಿ?” ಕೈ ಕೋಲಿನಲ್ಲಿ ತೊಡೆಯ ಮೇಲೆ ಚಪಾತಿ ಒತ್ತುತ್ತಲೆ ಕೇಳಿದ ಗೂಳಪ್ಪ. ಶ್ಯಾನುಭೋಗರು ಕೊಂಚ ಅಧೀರರಾದಂತೆ ಕಂಡರು. “ಓ ಓ ಓ... ಯಾಕೆ, ಇಲ್ಲವಲ್ಲ ಸ್ವಾಮಿ...” ಗೂಳಪ್ಪ ಕಣ್ಣಿನಿಂದಲೆ ಇರಿಯುತ್ತ, “ಈ ನಾಟಕ ಯಾವುದೂ ನನ್ನ ತಾವು ನಡೆಯಕ್ಕಿಲ್ಲ, ಶ್ಯಾನುಭೋಗರೆ. ನೇರವಾಗಿ ಮಾತಾಡಿ. ನೀವೆಲ್ಲ ಸೇರಿ ಆ ಪರಿವಾರದೋರ ಜಾತಿ ಎಂಕಿ ಅನ್ನೋಳ ಮಗ ಸುಮಾರು ಹತ್ತು ವರ್ಷದ ಹುಡುಗ ಹಲಗ ನೇಣು ಹಾಕ್ಕೊಂಡು ಸತ್ತದ್ದನ್ನ ನಮಗೆ ರಿಪೋರ್ಟ್ ಮಾಡದೆ, ಅವನ ಹೆಣಾವ ಮಣ್ಣು ಮಾಡಕ್ಕೆ ಅವಕಾಶ ಕೊಟ್ಟಿದ್ದೀರಿ. ಇದು ಸರ್ಕಾರಿ ಕಾನೂನಿನ ದೃಷ್ಠಿಲಿ ಘೋರ ಅಪರಾಧ ಅನ್ನೋ ವಿಷಯ ನಿಮಗೆ ತಿಳಿದೇ ಇದೆ...” ಎಂದು ಮಾತಿನ ಶಲಾಕೆಗಳನ್ನು ಎಸೆಯುತ್ತಿರುವ ಸಮಯದಲ್ಲಿ, ಶ್ಯಾನುಭೋಗರು “ಅದರಲ್ಲಿ ಮಾತ್ರ ನಾನು ಭಾಗಿಯಾಗಿಲ್ಲ, ಸ್ವಾಮಿ” ಎಂದು ಒದರಿಬಿಟ್ಟರು! ಅನಂತರ ಆ ಕ್ಷಣದಲ್ಲಿ ತಾವು ಆಡಿದ್ದು ಅವಿವೇಕವಾಯಿತು. ಎಂಬ ಅರಿವಾಗಿ, ನಾಲಿಗೆ ಕಚ್ಚಿ ಮುದುಡಿಹೋದರು.