________________
೧೦ ವೈಶಾಖ ಸುಣ್ಣ ಹಚ್ಚಿ ಎಡಹಸ್ತದ ಬೆರಳು ಸಂದಿಗಳಲ್ಲಿ ಜೋಡಿಸಿಟ್ಟ ವೀಳೆಯದೆಲೆಗಳನ್ನು ಬಾಯಿಗಿಟ್ಟು, ಕತ್ತನ್ನು ಹಿಂದಕ್ಕೆ ಒಗೆದು ಶಾಸ್ತ್ರಿಗಳು ಕಣ್ಣು ಮುಚ್ಚಿದರು. ಗಂಡ ಮನೆಯಲ್ಲಿಲ್ಲದಾಗ ಗುಂಡ್ಲುಪೇಟೆಯಿಂದ ಇನ್ನೊಬ್ಬನ ಮಡದಿಯನ್ನು ಹಾರಿಸಿ ತಂದದ್ದ; ಆರು ತಿಂಗಳು ಕಳೆಯುವುದರೊಳಗೆ ಅವಳ ಶೀಲದ ಬಗ್ಗೆ ಸಂಶಯಗೊಂಡು ಥಳಿಸುತ್ತಿದ್ದದ್ದು; ತಾನು ಮಾತ್ರ ಕಣ್ಣಿಗೆ ಬಿದ್ದ ಹುಡುಗಿಯರನ್ನು ಕೆಡಿಸಲು ಸನ್ನಾಹ ನಡೆಸುತ್ತಿದ್ದದ್ದು; ಇವನ ಕಾಟವನ್ನು ತಾಳಲಾರದೆ ಆಕೆ ನೇಣು ಹಾಕಿಕೊಳ್ಳಲು ಪ್ರಯತ್ನಪಟ್ಟಿದ್ದು; ತರುವಾಯ ಆರು ಮಕ್ಕಳನ್ನು ಹೆತ್ತವಳಡನೆ ಹಣದಾಸೆಗಾಗಿ ಸಂಪರ್ಕ ಬೆಳೆಸಿ, ಅವಳ ಗಂಡನಿಗೆ ವಿಷವುಣಿಸಿ ಕೊಂದದ್ದು: ತಳಂಗು ಬಳಂಗು ಮಾಡಿ ಗಂಡ ಸತ್ತ ಮುಂಡೆಯರ ಆಸ್ತಿಯನ್ನು ಲಪಟಾಯಿಸುತ್ತಿದ್ದದ್ದು; ತನ್ನ ಸುಳ್ಳು ದೈವಭಕ್ತಿ ಮತ್ತು ಕಪಟವಿದೇಯತೆಗಳಿಂದ ಸದಾ ಶಿವಪೂಜೆ, ಸದಾಚಾರಗಳಲ್ಲಿ ನಿರತರಾದ ಜಪ್ಪಯ್ಯನ ಮಠದ ಸ್ವಾಮಿಗಳ ಮುಗ್ಧ ಮನಸ್ಸನ್ನು ಗೆದ್ದು, ಅವರ ಪರಮಶಿಷ್ಯನಾಗಿದ್ದುದೇ ಅಲ್ಲದೆ, ನರಿಯಂತಹ ಕುಯುಕ್ತಿ ಮನುಷ್ಯನಾದುದರಿಂದ ಊರಿನ ಜನರೆಲ್ಲರೂ ಅವನಿಗೆ ಹೆದರುತ್ತಿದ್ದದ್ದು-ಒಂದೆ, ಎರಡೆ!... “ಯಾಕೆ ಸೋಮಿ, ನಿದ್ದೆ ಬಂದು ಬುಡ್ತ?- ಈಗ ನಿಮ್ಮ ತಂಗಮ್ಮನೋರು ಆಸಿಗೆ ಇಡುದು ಮನಗಿರೋದ್ರಿಂದ ಈ ಚಿಕ್ಕಮ್ಮಾರೆ ಅಡಿಗೆ ಅಲ್ವ?... ಇವರ ಕಯ್ಯ ಅಡಿಗೆ ಬೋ ಜೋರೂಂತ ಕಾಣಿಸ್ತದೆ!” ಎನ್ನುತ್ತ ನಂಜೇಗೌಡ ಬಚ್ಚಲುಕೋಣೆಯತ್ತ ತೆರಳುತ್ತಿದ್ದ ರುಕ್ಕಿಣಿಯನ್ನೆ ಹುಸಿನಗೆ ನಗುತ್ತ ಓರೆಯಾಗಿ ನೋಡಿದ. ಶಾಸ್ತ್ರಿಗಳ ಮುಖ ಗಂಟಿಕ್ಕಿತ್ತು. ಎದ್ದು ನಿಂತರು. “ಇದ್ಯಾಕೆ ಸೋಮಿ, ಅದೇನೂ ಮಾತಾಡ್ಡೆ ಎದ್ದೇ ಬುಟ್ರಿ?... ನಂಗೆ ಯೋಳಿಕಳಿಸಿದ್ದೇನು?- ಈಗ ಇಂಗ ಕ್ವಿಂಟು ನಿಂತಿದ್ದೇನೆ?...” ನಂಜೇಗೌಡನ ಮಾತಿಗೆ ಲಕ್ಷ್ಯ ಕೊಡದೆ, ಶಾಸ್ತ್ರಿಗಳು ಹೆಜ್ಜೆಯಿಡುತ್ತ, “ತೋಟಕ್ಕೆ ಹೋಗ್ತಾ ಇದೀನಿ...ಬನ್ನಿ ನಂಜೇಗೌಡರೆ. ಹಾಗೆ ಮಾತಾಡ್ತ ಹೋಗೋಣ” ಎಂದವರು, ರುಕ್ಕಿಣಿಯತ್ತ ತಿರುಗಿ” ಸರಸಿ ಇನ್ನು ಬರಲಿಲ್ಲವೆ?” ಎಂದು ಕೇಳಿದಾಗ, “ಇಷ್ಟೊತ್ತಿಗೆ ಎಲ್ಲಿ ಬಾಳೆ?... ನನ್ನ ಜತೇಲಿ ನಮ್ಮ ತೋಟಕ್ಕೆ ಬರೋ ದಿನಗಳನ್ನು ಬಿಟ್ಟು, ಬಾಕಿ ದಿನಗಳಲ್ಲಿ ನಾಲ್ಕಾರು ಮನೆ ಸುತ್ತಾಡುವ ಬೆಕ್ಕಿನ ಮರಿ ಆಗ್ತಾಳೆ. ಅದರಲ್ಲೂ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳು ಇವಳನ್ನು ತೀರಾ