ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೪ ವೈಶಾಖ ಅನುಮೋದಿಸಿ, “ತಮ್ಮನ್ನ ಹುಣಸೂರಿಗೆ ಬಂದು ನಮ್ಮ ಮನೇಲಿ ಕಾಣೀವಿ”- ಹೀಗೆ ಆಶ್ವಾಸನೆ ಕೊಟ್ಟಿದಲ್ಲದೆ, ಹಿಂದೆ ಉಳಿದ ಪೇದೆಯ ಕೈಗೆ ಹತ್ತು ರೂಪಾಯಿಗಳನ್ನೂ ಇಟ್ಟು, ಅವನೊಂದಿಗೆ ಏನೇನೊ ಗುಟ್ಟುಗುಟ್ಟಾಗಿ ಪಿಸುಮಾತಾಡಿದ. ಆ ರಾತ್ರಿಯೆ ಯಜಮಾನರೆಲ್ಲ ಹುಣಸೂರಿಗೆ ತೆರಳಿ ಸಬ್‌ಇನ್‌ಸ್ಪೆಕ್ಟರ್ ಗೂಳಪ್ಪನನ್ನು ಅವನ ಮನೆಯಲ್ಲಿಯೆ ರಹಸ್ಯವಾಗಿ ಕಂಡು ಬಂದರು. ಅನಂತರ ಗೂಳಪ್ಪ ದರುಮನಳ್ಳಿಯ ಕಡೆ, ಎಂಕಿ ಹೈದನ ಈ ಕೇಸಿನ ಸಂಬಂಧವಾಗಿ ತಲೆಹಾಕಲಿಲ್ಲ. ಊರಿನಲ್ಲಿ ಅದರ ಬಗ್ಗೆ ಪ್ರಕಟವಾಗಿ ಮಾತಾಡಲು ಧೈಯ್ ಬರದಿದ್ದರೂ ಒಳಗೊಳಗೇ ಆ ಇನ್‌ಸೆಕ್ಟರ್ ಕಯ್ಯಜಯಮಾನರುಗಳು ಸರಿಯಾಗಿ ಬೆಚ್ಚಗೆ ಮಾಡಿರಬೇಕು. ಇಲ್ಲದಿದ್ದರೆ, ಆವಯ್ಯನಾ ಇಲ್ಲೀಗಂಟ ಬರದೇ ಇರೋನು!ಎಂದು ಕೊಳ್ಳುತ್ತಿದ್ದರು ಊರಿನ ಜನ. ಯಜಮಾನರ ನಡತೆಯಿಂದ ಲಕ್ಕನ ಮನಸ್ಸು ಒಳಗೇ ಹೇಸಿತು. ಅಪರೂಪಕ್ಕೆ ಬಂದ ರುಕ್ಕಿಣಿಯನ್ನು ಅಕ್ಕ ಪಾರ್ವತಿಯು ಭೀಮನಳ್ಳಿಯ ತಮ್ಮ ಮನೆಯಲ್ಲಿ ಬೇಡಬೇಡವೆಂದೂ ಒಂದು ತಿಂಗಳಿನ ಕಾಲ ಒತ್ತಾಯಪೂರ್ವಕವಾಗಿ ಉಳಿಸಿಕೊಂಡಿದ್ದಳು. ದಿನಕ್ಕೊಂದು ಬಗೆಯಲ್ಲಿ ಉಪಚರಿಸಿದ್ದಳು. “ಇನ್ನು ದರುಮನಳ್ಳಿಯ ನಿಮ್ಮ ಮನೇಲಿ, ನಿನ್ನ ಕೈಯೂಟ ಇದ್ದೇ ಇದೆ. ಇಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಸುಧಾರಿಸಿಕೊ. ಯಾಕೊ ಮದಲಿಗೂ ಈಗೂ ಬಲು ತೆಗೆದುಹೋಗಿದ್ದೀಯೆ” ಎಂದಿದ್ದಳು. ಭಾವ ಚಂದ್ರಶೇಖರಯ್ಯನವರು ಅದೇ ಒತ್ತಾಯ. ಮೇಲಾಗಿ ಗಿರಿಜೆಗೆ ಒಗ್ಗಿಹೋಗಿದ್ದ ಸರಸಿ ತನ್ನ ಸಂಗಾತಿಯನ್ನು ಬಿಟ್ಟು ಹೊರಡುವುದು ಅಷ್ಟು ಸುಲಭವೆ? ಭಾವನವರ ಗಾಡಿಯಲ್ಲಿ ತಮ್ಮ ಹಳ್ಳಿಗೆ ವಾಪಸು ಬರುವಾಗ ಅಕ್ಕ ಮತ್ತು ಭಾವನ ಹಾಲಿನಂತಹ ಸಂಸಾರವನ್ನು ನೆನೆದು ಸಮತೋಷಪಟ್ಟಳು. ಪುಣ್ಯಶಾಲಿಗಳು. ಭಗವಂತ ಅವರನ್ನು ಹಾಗೆಯೆ ಸುಖವಾಗಿ ಇಟ್ಟಿರಲಿ ಎಂದು ಮನಸಾರೆ ಹಾರೈಸಿದಳು. ದರುಮನಳ್ಳಿಗೆ ಬಂದ ಬಳಿಕ ಹಳೆಯ ಬದುಕಿನ ನಿರ್ವಹಣೆಗೆ ತನ್ನ ಮನಸ್ಸನ್ನು ತೊಡಗಿಸಿದಳು. ಬೇರೇನೂ ವಿಶೇಷವಿಲ್ಲದೆ ಯಾಂತ್ರಿಕವಾಗಿ ಇನ್ನೊಂದು ತಿಂಗಳು ಉರುಳಿತು.