ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೫೩ ಹಜಾರದಲ್ಲಿದ್ದ ರುಕ್ಕಿಣಿಗೂ ಕೇಳಿಸದೆ ಇರಲಿಲ್ಲ. ತೊಟ್ಟಿಯ ಕಂಬವೊಂದನ್ನು ಒರಗಿ ಹೂಬತ್ತಿ ಹೊಸೆಯುತ್ತಿದ್ದ ರುಕ್ಕಿಣಿಯನ್ನು ಈ ಮಾತುಗಳು ಕಾದ ಸೀಸದಂತೆ ಇರಿದವು. ಶಾಸ್ತಿಗಳನ್ನೂ ಸಹ ಅವರು ಆ ರಾತ್ರಿ ಹಜಾರದ ತಮ್ಮ ಮೂಲೆಯ ಹಾಸಿಗೆಯ ಮೇಲೆ ಮೈಚಲ್ಲಿದಾಗಲೂ- 'ಒಂದು ತಪ್ಪಿನ ಜೊತೆಗೆ ಅದಕ್ಕಿನ್ನ ಘೋರವಾದ ತಪ್ಪನ್ನ ಮಾಡಿದ ಹಾಗಗುತ್ತೆ.'- ಲಕ್ಷಮ್ಮನ ಈ ಮಾತುಗಳು ಹರಿತವಾದ ಸಹಸ್ರ ಸಹಸ್ರ ಚೂರಿಗಳಾಗಿ ಇರಿಯುತ್ತಿದ್ದವು. ಅವರಿಗೆ ಮಲಗಲಾಗಲಿಲ್ಲ. ಎದ್ದರು. ರುಕ್ಕಿಣಿಯ ಕೋಣೆಯತ್ತ ನಡೆದರು. ಕೋಣೆಯ ಹೊರಗೇ ನಿಂತು, "ರುಕ್ಕೂ... ರಕ್ಕೂ...” ಎಂದು ಕೂಗಿದರು. ಮಾವನವರ ಧ್ವನಿಯಲ್ಲಿದ್ದ ಕಂಪವನ್ನು ಗುರುತಿಸಿ, ರುಕ್ಕಿಣಿ ಬೆಚ್ಚಬಿದ್ದಳು!... ಮಾವನವರನ್ನು ಹಿಂದೆ ಹಿಡಿದಿದ್ದ ಭೂತವೆ ಮತ್ತೆ ಹಿಡಿಯಿತೆ? ಎಂದು ಶಂಕಿಸಿದಳು. ಆದರೆ ಶಾಸ್ತ್ರಿಗಳು ಪ್ರಯಾಸಪಟ್ಟು”... ತುಂಬಾ ಅನ್ಯಾಯ ಮಾಡಿದೆ... ಲಕ್ಕನಿಂದ ಔಷಧಿ ತಗೋಬಾರದು... ಒಂದು ಪಾಪ ಆಲಿಸಲಿಕ್ಕೆ ಹೋಗಿ...” ಎನ್ನುತ್ತ, ಉಳಿದ ಮಾತುಗಳನ್ನು ತಮ್ಮೊಳಗೇ ಸುರಿದುಕೊಳ್ಳುತ್ತ ತೆರಳಿ ತಮ್ಮ ಹಾಸಿಗೆಯಲ್ಲಿ ಉರುಳಿದರು. ರಾತ್ರಿಯೆಲ್ಲ ಒಂದು ಮಗ್ಗಲಿನಿಂದ ಇನ್ನೊಂದು ಮಗ್ಗುಲಿಗೆ ಹೊರಳಾಡಿದರು. ನಿದ್ರೆ ಮಾತ್ರ ಕಣ್ಣಿಗೆ ಹತ್ತಲಿಲ್ಲ. ಒಮ್ಮೊಮ್ಮೆ ಹೊರಳುವಾಗಲೂ “ನಾನು ಪಾಪಿ-ನಾನು ಪಾಪಿ” ಎಂದು ಹಲುಬುವರು... ತನ್ನನ್ನು ಕಂಡರೆ ಲಕ್ಕನಿಗೆ ತುಂಬಾ ಗೌರವ, ಜೊತೆಗೆ ರುಕ್ಕಿಣಿಯೂ ಈ ಹೂಟದಲ್ಲಿ ಸೇರಿರಬೇಕು. ಇವರಿಬ್ಬರೂ ತನ್ನ ಮಾನವನ್ನು ಉಳಿಸಲು ತಮ್ಮಿಬ್ಬರ ಮೇಲೂ ಈ ಘೋರ ಅಪರಾಧವನ್ನು ಆರೋಪಿಸಿಕೊಂಡಂತಿದೆ!... ಎಂದು ಅನುಮಾನಿಸಿದರು... ಅತ್ತ ರುಕ್ಕಿಣಿಗೆ ಉಸಿರು ಕಟ್ಟುತ್ತಾ ಇತ್ತು, ಈ ಪರಮ ಸಂಕಟದಿಂದ ಪಾರಾಗಲು ಉಳಿದಿದ್ದ ಒಂದೇ ಒಂದು ಹೊರದಾರಿಯೂ ಈಗ ಮುಚ್ಚಿಹೋಗಿತ್ತು. ನೇಣುಗಂಬ ಹತ್ತಿರ, ಹತ್ತರವಾಗುತ್ತಿದೆ, ಎಂಬ ಭಾವನೆ ಬಲಿಯಿತು... ಸರಸಿ ತನ್ನ ಎದೆಯ ಮೇಲೆ ಕೈಯಿಟ್ಟು ಆರಾಮವಾಗಿ ನಿದ್ರಿಸುತ್ತಿದ್ದಳು. ತಾನೂ ಬಾಲ್ಯದಲ್ಲಿ ತನ್ನ ತಾಯಿಯ ಮಗ್ಗುಲಲ್ಲಿ ಹೀಗೆಯೆ ಮುಗ್ಧ ಬಾಲಕಿಯಾಗಿ ಮಲಗುತ್ತಿದ್ದಿರಬೇಕು... ಕಳೆದುಹೋದ ಆ ಸುಂದರ ದಿನಗಳು ಈಗ ಕೇವಲ ನೆನಪು. ಎಂದೆಂದಿಗೂ ಅವು ಮತ್ತೆ ಮರಳುವು, ಎಂದು ವ್ಯಾಕುಲಗೊಂಡಳು...