________________
೩೧೪ ವೈಶಾಖ ತುಂಬಿದ್ದನ್ನು ಈ ಹುಡುಗಿ ಇಷ್ಟು ಶೀಘ್ರವಾಗಿ ಮರೆಯಿತೆ?... ಇಂಥವರಿಗೆ ಉಪಕಾರ ಮಾಡಿದರೆ ಕೊನೆಯಲ್ಲಿ ಸಿಗುವ ಪ್ರತಿಫಲ ಇದೇಯೆ?- ಮನುಷ್ಯ ಸ್ವಭಾವ ವಿಚಿತ್ರವೇ ಸರಿ! ಎಂದು ಅವಳ ಒಳಗು ಸಹತಹಿಸಿತು. ರುಕ್ಕಿಣಿ ಹತಾಶಳಾದಳು. ಇನ್ನು ತನ್ನವರು ಎನ್ನುವವರು ಯಾರೂ ಉಳಿದಿಲ್ಲ. ಭೀಮನಳ್ಳಿ ಅಕ್ಕ-ಮೈಗೆ ಸ್ವಸ್ಥವಿಲ್ಲ, ಸದ್ಯಕ್ಕಂತೂ ನಾ ಬರಲಿಕಾಗಲ್ಲ, ಎಂದು ಪತ್ರ ಹಾಕಿದ್ದಾಳೆ. ಅವಳಿಗೆ ನಿಜವಾಗಿಯೂ ಸ್ವಸ್ಥವಿಲ್ಲವೊ, ಅಥವಾ ನಮಗ್ಯಾಕೆ ಈ ಉಪದ್ವಾಪವೆನ್ನುವ ಅಸಡ್ಡೆಯೊ? ಅಥವಾ ಅವಳು ನಮ್ಮ ಸಮಾಜಕ್ಕೆ ಹೆದರಿ ಹೀಗೆ ನನ್ನಿಂದ ದೂರವಾಗಿರಬಹುದೆ? – ಅವಳು ಎಷ್ಟಾದರೂ ಹೆಣ್ಣು, ಅವಳಿಗೆ ಧೈರ್ಯ ಸಾಲದು ಎನ್ನೋಣ. ಆದರೆ ನಮ್ಮ ಭಾವನೂ ಅಂಜುಗುಳಿಯಾಗಬೇಕೆ?... ರುಕ್ಕಿಣಿಗೆ ಈಗ ಯಾವ ದಾರಿಯೂ ಕಾಣುತ್ತಿಲ್ಲ...... ಈಗ ಅವಳು ಬಂದಿ, ಚಿತ್ರಮೂಲನಕೋಟೆಯೊಳಗೆ ತಾನು ಸಿಕ್ಕಿಕೊಂಡಂತೆ ಆಗಿದೆ. ಇದರಿಂದ ಪರಾಗುವ ಮಾರ್ಗವೇ ಈಗ ಅವಳಿಗೆ ಗೋಚರಿಸುತ್ತಿಲ್ಲ..... - ರುಕ್ಕಿಣಿಯ ಮನಸ್ಸು ಹೀಗೆ ಡೋಲಾಯಮಾನವಾಗಿರುವಾಗ ಸರಸಿಯು ಎಲ್ಲಿಂದಲೋ ಬಿರುಗಾಳಿಯಂತೆ ಒಳಗೆ ಬಂದಳು, “ಅಕ್ಕ, ನಾನು ಪಂಚಾಯ್ತಿ ನೋಡೋಕೆ ಹೋಗಬೇಕು. ಅಲ್ಲಿ ಎಷ್ಟೊಂದು ಜನ ಸೇರಿದ್ದಾರೆ ಅಂತ!- ನೀನೂ ಬಾ ಅಕ್ಕ, ಹೋಗೋಣ” ಎಂದು ರುಕ್ಕಿಣಿಯನ್ನು ಕರೆದಳು. “ಬೇಡಮ್ಮ, ಅಲ್ಲೆಲ್ಲ ಹೋಗಬಾರದು” ಎಂದು ಸರಸಿ ಹೋಗದಿರುವಂತೆ ತಡೆಯಲು ರುಕ್ಕಿಣಿ ಪ್ರಯತ್ನಪಟ್ಟಳು. “ಯಾಕೆ ಹೋಗಬಾರದು?... ಈಚಿಚೇಗೆ ನೀನು ಹಿಂಗೇನೆ- ಅಳು ಮುಂಜಿ, ಮೊದಲ ಹಂಗೆ ನಗನಗ್ನ ಇರದೆ ಯಾವಾಗ ನೋಡಿದರೂ ಜೋಲುಮುಖ ಹಾಕ್ಕೊಂಡು ಕಣ್ಣೀರು ಸುರಿಸ್ತ ಕೂತಿರೋದು! ನನ್ನ ಕೈಲಿ ಆಗಲ್ಲಮ್ಮ, ನಾ ಹೋಗಲೇ ಬೇಕು.”- ಸರಸಿ ಹಟ ಮಾಡಿದಳು. “ಬೇಡ ಸರಸಿ, ಅಂಥ ಜಾಗಕ್ಕೆ ನೀನು ಹೋಗಬಾರದು.” ಹೇಳಿ ರುಕ್ಕಿಣಿ ಅವಳನ್ನು ಹಿಡಿಯಹೋದಳು. ಚಿಗರೆಯಂಥ ಬಾಲೆ, ಸರಸಿ. ಅವಳು ರುಕ್ಕಿಣಿಯ ಕೈಗೆ ಸಿಕ್ಕುವಳೆ?- ಬೀದಿ ಬಾಗಿಲಿನ ಮೆಟ್ಟಿಲುಗಳನ್ನು ಎರಡೆರಡಾಗಿ ನೆಗೆಯುತ್ತ, ಚಾವಡಿಯುತ್ತ ದೌಡು ಹೊಡೆದಳು...