________________
ಸಮಗ್ರ ಕಾದಂಬರಿಗಳು ರುಕ್ಕಿಣಿಯ ಆಲೋಚನೆ ಈಗ ಸರಸಿಯನ್ನು ಅಪಿತು: ಸರಸಿ ಏನೂ ಅರಿಯದ ಮುಗ್ಧ ಹುಡುಗಿ, ಮುಂದೆ ಭವಿಷ್ಯದಲ್ಲಿ ಅವಳಿಗೆ ಏನೇನು ಕಾದಿದೆಯೊ?- ಎಂಬ ಭಾವನೆ ಸುಳಿದ ಕ್ಷಣದಲ್ಲೆ, ತನ್ನ ಬದುಕು ನಾಶವಾಯಿತೆಂದು, ಅವಳ ಬುದುಕು ಹಸನಾಗುವುದಿಲ್ಲವೆಂಬ ಶಂಕೆ ಸರಿಯೆ?... ಆದರೂ ತನಗೇಕೊ ಕಾತರ. ತನ್ನ ಬದುಕಾದಂತೆ ಅವಳ ಜೀವನವೂ ಎಲ್ಲಿ ಛಿದ್ರವಾಗುವುದೊ ಎಂಬ ಕಳವಳ...ಸರಸಿಯದು ಎಂಥ ಒಳ್ಳೆಯ ಸ್ವಭಾವ?ತಾನು ಆಳುತ್ತ ಕುಳಿತಿದ್ದರೆ, “ಹೂ ಹೀಗೆಲ್ಲ ಅಳಬಾರದಮ್ಮ” ಎಂದು ತನ್ನ ಪುಟ್ಟ ಕೈಗಳಿಂದ ತನ್ನ ಲಂಗವನ್ನೆತ್ತಿ ಹಿಡಿದು ಅದರ ತುದಿಯಿಂದ ತನ್ನ ಕಣ್ಣೀರನೊರೆಸಿ, “ಬಾಕ್ಯ, ಕವಡೆ ಆಡೋಣ” ಎಂದು ಕರೆಯುವಳು.... ಒಂದು ದಿನ ನಾನು ದೇವರಿಗೆ ಹೂಬತ್ತಿ ಹೊಸೆಯುತ್ತ ಕೂತಿದ್ದೆ. ಯಾವ ಮಾಯದಲ್ಲೋ ಈ ಪಟಿಂಗಿ ದೇವರ ಕೋಣೆಗೆ ನುಗ್ಗಿ, ಅಲ್ಲಿ ಲಕ್ಷ್ಮೀನೃಸಿಂಹದೇವರ ಪಟಕ್ಕೆ ಧರಿಸಿದ್ದ ಹೂಮಾಲೆಯನ್ನು ಎತ್ತಿ ತಂದು, ಹಿಂದಿನಿಂದ ಮೆತ್ತಗೆ ತನ್ನ ತಲೆಗೂದಲಿಗೆ ಸೆಕ್ಕಿಸಿ, “ ನೋಡಿದ್ಯಾ ಈಗ ಏನು ಚೆನ್ನಾಗಿ ಕಾಣುತ್ತೆ? ನೀನು ಹೂ ಮುಡಿದಿದ್ದರೇ ಚೆನ್ನ!- ಇನ್ನು ಮೇಲೆ ನೀನು ಹಿಂಗೇ ಹೂವು ಮುಡಿಕೋಬೇಕು” ಎಂದಿದ್ದಳು. ತತ್ಕ್ಷಣ ಆ ಮಾಲೆಯನ್ನು ತೆಗೆದು, “ಇಲ್ಲ ಸರಸಿ, ನಾನು ಹೂವು ಮುಡಿಯೋ ಹಾಗೇ ಇಲ್ಲ” ಎಂದಾಗ, “ಹಂಗಿದ್ದರೆ, ನಮ್ಮಮ್ಮನ ಹಂಗೆ ನೀನೂ ತಲೆಕೂದಲ ತೆಗಿಸಬೇಕಾಗಿತ್ತು, ಅಲ್ವ?- ನಂಗೇನೂ ಕೂದಲಿರೋರು ಹೂವು ಮುಡಿದರೇ ಚೆಂದಾಮ್ಮ...” ಸರಸಿಯ ವಾದಕ್ಕೆ ಹೇಗೆ ಉತ್ತರ ಕೊಡಬೇಕೊ ತಿಳಿಯದೆ, “ನೀನು ಬಲು ಜಾಣೆ” ಎಂದು ಬಾಚಿ ತಬ್ಬಿ ಮುತ್ತಿಟ್ಟಿದ್ದಳು. ಆದರೆ ಕೆಲವು ದಿನಗಳ ಹಿಂದೆ ಇದೇ ಸರಸಿ ರುಕ್ಕಿಣಿಯ ಕಣ್ಣಿನಲ್ಲಿ ನೀರು ತರಿಸಿದ್ದಳು. ಒಂದು ಮಧ್ಯಾಹ್ನ ರುಕ್ಕಿಣಿಯು ಬಚ್ಚಲುಮನೆಯಲ್ಲಿ ವಾಂತಿ ಮಾಡುತ್ತಿರುವಾಗ, “ಈಚೀಚೆ ನೀನು ವಾಂತಿ ಮಾಡಿಕೊಳ್ತಾನೆ ಇತ್ತೀಯಲ್ಲ?- ಯಾಕಕ್ಕ?... ಊಟಾನೂ ಸತ್ಯಾಗಿ ಮಾಡಲ್ಲ!” ಎಂದು ಕೇಳಿದ್ದಳು. ರುಕ್ಕಿಣಿಯ ಕಣ್ಣಿನಲ್ಲಿ ನೀರು ಚೆಲ್ಲನೆ ತುಂಬಿತು. ತಾನು ಕೇಳಿದ ಪ್ರಶ್ನೆಯಿಂದ ಅಕ್ಕನ ಕಣ್ಣಿನಲ್ಲಿ ನೀರು ತುಂಬಿದ್ದು ಕಂಡು ಸರಸಿಗೆ ದಿಗ್ಧಮೆಯಾಯಿತು. ತಾನೂ ಅಕ್ಕನನ್ನು ತಬ್ಬಿ ಅಳತೊಡಗಿದ್ದಳು... - ೩೧. ಚಾವಡಿ ಮುಂದೆ ನೆರೆದ ಜನಸ್ತೋಮದ ಮುಂದೆ ಲಕ್ಕನ ನ್ಯಾಯ