________________
ಸಮಗ್ರ ಕಾದಂಬರಿಗಳು ೩೩೧ “ಒಳ್ಳೆ ಅವಸರದ ಹೋಬಳಿ ಶಿರಸ್ತೇದಾರ ಕಣಯ್ಯ ನೀನು!... ನೋಡು, ನೀನು ಕೇಳಿದ್ದಕ್ಕೆ ಇಷ್ಟು ಮಾತ್ರ ಹೇಳೀನಿ. ಇವತ್ತು ಪೂರ್ಣಿಮೆ, ದಿನವೇನೊ ವ್ಯವಹಾರಕ್ಕೆ ಪ್ರಶಸ್ತವಾಗಿದೆ. ಆದರೆ ಹಟ್ಟಿಗೆ ಬಂದು, ನೀನು ಯಾವ ಶುಭಲಗ್ನದಲ್ಲಿ ಕುಳಿತು ವ್ಯವಹರ ಮುಗಿಸಬೇಕು ಎನ್ನೊಂದನ್ನ ಗುಣಿಸಿ ಲೆಖ್ಯ ಹಾಕಿ ಹೇಳಿಕೊಡ್ತೀನಿ.... ಈಗ ನೀನು ನಡಿ” ಎಂದು ಇನ್ನು ಒಂದು ಗಳಿಗೆ ತಡೆದರೂ ಅಪಾಯವೆಂದು ಭರಭರನೆ ಕೆರೆಯ ಕಡೆ ನಡೆದರು. “ಅಂತೂ ಈ ಜಿನ ಯವಾರ ಮಾಡಬೌದು. ಸದ್ಯ, ವೋಟು ಯೋಳಿ ಕೊಟ್ರೆಲ್ಲ. ಅದೇ ನಂಗೆ ಪರಮಾನ್ನ ಉಂಡೇಟು ತ್ರುಪ್ತಿ ಆಗೋಯ್ತು. ನೀವು ನಡೀರಿ. ಆವಯ್ಯನೂ ಕರಕಂಡು ನೀವು ಹೇಳಿದಂಗೆ ಒಂದರ್ಧ ಮುಕ್ಕಾಲು ಗಂಟೆ ತಡಮಾಡಿ ಬಂದುಬುಡ್ತೀನಿ” ಎಂದು ಕೂಗಿ ಹೇಳಿ, ತನ್ನ ಹಟ್ಟಿಗೆ ಹಿಂದಿರುಗಿದ. “ಈ ವ್ಯವಹಾರ ನಿಷ್ಕರ್ಷೆ ಮಾಡಲಿಕ್ಕೆ ರುಸು ಎಷ್ಟು ಕೇಳಿದರೆ ತಡೆಯುತ್ತೆ?” ಎಂಬ ತರ್ಕದಲ್ಲಿ ತಲ್ಲೀನರಾಗಿ ವೆಂಕಣ್ಣ ಜೋಯಿಸರು ಕೆರೆಯನ್ನು ಸಮೀಪಿಸಿ, ಅದರೊತ್ತಿನ ಮಳೆಯೊಂದರ ಮರೆಗೆ ಪಂಚೆಯ ಕಚ್ಚೆಯನ್ನು ಸಡಿಲಿಸಿ ಕುಳಿತರು. ಗೋಸುಸಾಬರೂ ಲಕ್ಕನೂ ಕೊಪ್ಪಲನ್ನ ಸಮೀಪಿಸುತ್ತಿದ್ದಂತೆ, “ಅರೆ, ಯಾಕಯ್ಯ-ದಾರಿ ಉದ್ದಕೂ ನಾನು ನೂರು ಮಾತಾಡಿದ್ರೆ, ನೀನು ಐತಲ್ಲ ಒಂದು ಮಾತಾದ್ರೂ ಆಡಬ್ಯಾಡದು?... ಈಪಟ್ಟು ನಿನ್ನ ಯೋಚ್ಛೆ ಗೀಚ್ಚೆ ಎಲ್ಲಾನು ಬುಟ್ಟುಬುಡು. ನಮ್ಮ ಕೊಪ್ಪಲ್ನಲ್ಲಿ. ಸುತ್ತಮುತ್ತ ಹಳ್ಳಿಗೋಳಲ್ಲಿ ಕೂಲಿಕಂಬಳ ನಿನ್ನಂತ ಗೇಯೋನಿಗೆ ಮುಲಾಜಿಲ್ಲೆ ಸಿಕ್ತದೆ. ಕಯ್ಯಲ್ಲಿ ಒಂದೇಟು ಸೇರಿತು ಅನ್ನು, ಆಗ ನಮ್ಮ ಸಾಬರದೆ ಒಂದು ಚೆಂದುಳ್ಳಿ ಹೆಣ್ಣು ನಿಕಾ ಮಾಡಿಕಂಡುಬುಡು. ನಿನ್ನ ಜೀವಕ್ಕೆ ಆರಾಮ್‌ಬಂದುಬುತ್ತದೆ. ಏನಂತಿಯ?” – ದೊಡ್ಡದಾಗಿ ನಕ್ಕು ಗೋಸುಸಾಬರು ಕನ ಬೆನ್ನು ತಟ್ಟಿದರು. ಹಾಗೆ ತಟ್ಟಿದಾಗ ಲಕ್ಕನ ಬೆನ್ನಿನಲ್ಲಿ ಮೂಡಿದ್ದ ಬಾಸುಂಡೆಗಳು ನೋವಿನಿಂದ ಮುಲುಕಿದವು ಎನ್ನುವುದನ್ನು ಅವರು ಕಾಣರು. ಆ ನೋವಿನಲ್ಲೂ ಹೇಗೊ ಮುಖದಲ್ಲಿ ನಗು ತಂದು, ಲಕ್ಕ ಆ ಕೊಪ್ಪಲಿನೊಳಗೆ ಕಾಲಿಟ್ಟ ವೈಶಾಖದ ಹುಣ್ಣಿಮೆ ಕಳೆದ ಮಾರನೆಯ ದಿನ ದರುಮನ ಹಳ್ಳಿಯ ಬ್ರಾಹ್ಮಣರು ಸಭೆ ಸೇರಿ ಹೊಲೆಯನ ಸಂಪರ್ಕ ಮಾಡಿ ಮಹಾಪಾತಕವೆಸಗಿದ್ದರಿಂದ