________________
೩೩೬ ವೈಶಾಖ ಇದೇ ವ್ಯಾಕುಲದೊಡನೆ ಶಾಸ್ತ್ರಿಗಳು ಮನೆಯೊಳಗೆ ಬಂದರು. ಇಷ್ಟು ದಿನ ಹಿತ್ತಾಳೆ ತಂಬಿಗೆಯಲ್ಲಿ ನೀರು ತುಂಬಿಟ್ಟು ಮರೆಯಾಗುತ್ತಿದ್ದವಳು, ಈ ದಿನ ಅವರು ಕೈಕಾಲು ತೊಳೆಯಲು ರುಕ್ಕಿಣಿಯೇ ನೀರು ಕೊಟ್ಟಳು. ಶಾಸ್ತ್ರಿಗಳು ಪೂಜಾದಿಗಳನ್ನು ಮುಗಿಸಿ ಸರಸಿಯೊಡನೆ ಮಧ್ಯಾಹ್ನ ಭೋಜನಕ್ಕೆ ಕುಳಿತಾಗ ಚಿತ್ರಾನ್ನ, ಬೂದುಗುಂಬಳಕಾಯಿ ಮಜ್ಜಿಗೆಹುಳಿ, ಆಂಬೋಡೆ, ಸೌತೆಕಾಯಿ ಕೋಸುಂಬರಿ, ಬದನೆಕಾಯಿ ಗೊಜ್ಜು, ಗಸಗಸೆ ನೀರು ಇತ್ಯಾದಿಗಳನ್ನು ಗಮನಿಸಿ ಸೋಜಿಗಪಟ್ಟರು. ಅಂಥ ದುಃಖದ ಸಂದರ್ಭದಲ್ಲೂ, “ಇದೆಲ್ಲ ಯಾಕೆ ಮಾಡಿದೆ?” ಕೇಳಿದರು. “ನೆನ್ನೆ ಪೂರ್ಣಿಮ ಗಲಾಟೆ ಇತ್ತಲ್ಲ. ಏನೂ ಮಾಡಲಿಕ್ಕೆ ಆಗಲಿಲ್ಲ. ಅದಕ್ಕೆ ಈ ದಿನ ಅದರ ನೆನಪಿಗಾಗಿ ಇಷ್ಟಾದರೂ ಇರಲಿ ಎಂದು ಮಾಡಿದೆ” ಎಂದು, ಸರಸಿಗೆ ಇನ್ನಷ್ಟು ಗಸಗಸೆ ನೀರನ್ನು ಅವಳ ಖಾಲಿಯಾಗಿದ್ದ ಬಟ್ಟಲಿಗೆ ತುಂಬಿ ಹಿಂದಿರುಗಿದಾಗ, ಅವಳು ತಲೆಯಿಂದ ಸ್ನಾನ ಮಡಿ ಆತುರಕ್ಕೆ ಹೇಗೊ ಹಾಕಿದ್ದ ಗಂಟು ಬಿಚ್ಚಿಹೋಗಿ, ಅಳ ತಲೆ ಕೂದಲು ಅವಳ ಬೆನ್ನ ಮೇಲೆಲ್ಲ ಹರಡಿತು. ಅವಳು ಕೋಣೆ ಹೊಕ್ಕು ಸರಸರನೆ ಪುನಃ ಕೂದಲನ್ನು ಒಟ್ಟುಗೂಡಿಸಿ ಈ ಬಾರಿ ಬಿಗಿಯಾಗಿ ಗಂಟು ಹಾಕಿದಳು... ಆದರೆ ಅವಳ ಬಿಚ್ಚಿದ ಮುಡಿಯನ್ನು ಕಂಡ ಶಾಸ್ತಿಗಳ ಮನದಲ್ಲಿ ಭಾವನೆಗಳ ಒಂದು ಗಂಟೆ ಬಿಚ್ಚಿಕೊಂಡಿತು... ಊಟ ಮುಗಿದು ಕೈ ತೊಳೆದು ಎದ್ದರು. ಊಯ್ಯಾಲೆಯ ಮೇಲೆ ಕುಳಿತರು. ಚಿಂತೆ ಕಾಡುತ್ತಲೆ ಇತ್ತು: 'ನನ್ನ ಮಡದಿಯನ್ನು ಸುಟ್ಟು ಬಂದ ಬಳಿಕ ನನ್ನ ಕಾಮವನ್ನೂ ಸುಟ್ಟೆನೆಂದು ಬಗೆದಿದ್ದೆ. ಬಹುಕಾಲ ಅದೇ ರೀತಿ ಅಸಾಧಾರಣ ಸಂಯಮದಿಂದ ನನ್ನ ಬ್ರಹ್ಮಚರ್ಯವನ್ನು ಪಾಲಿಸುತ್ತ ಊರಿನವರಿಂದ ಶಹಬಾಸ್‌ಗಿರಿ ಪಡೆದಿದ್ದುದೂ ಉಂಟು... ಆದರೆ ತುಂಬುಹರೆಯದ ಒಂದು ಹೆಣ್ಣು ಒಂಟಿಯಾಗಿ ಮನೆಯಲ್ಲಿ ಉಳಿದಾಗ, ನಾನು ಬಹುಪ್ರಯಾಸದಿಂದಲೆ ವಿಧಿಸಿಕೊಂಡಿದ್ದ ದಿಗ್ಧಂಧನಗಳೆಲ್ಲ ಅನಿರೀಕ್ಷಿತವಾಗಿ ಒಂದೊಂದಾಗಿ ಕಳಚಿಬಿದ್ದವು!... ನಾನು ಇನ್ನೂ ಒಂದು ತಪ್ಪು ಮಾಡಿದೆನೊ, ಏನೊ?- ಕೇರಿಯ ಬ್ರಾಹ್ಮಣರು ಅವಳ ಕೇಶಮುಂಡನ ಮಾಡಲು ಹವಣಿಸಿದಾಗ ನಾನು ವಿರೋಧಿಸಬಾರದಿತ್ತೇನೋ?... ತುರವಾಯ ನನ್ನ ತಂಗಿ ಸುಶೀಲ ಒಂದು ರಾತ್ರಿ ಇವಳ ತಲೆಗೂದಲನ್ನು ಮರೆಮೊಸದಲ್ಲಿ ಕತ್ತರಿಸಲು ಹೋದಾಗ, ನಾನು ಅಡ್ಡಿಪಡಿಸಬಾರದಿತ್ತೇನೋ?' -ಹೀಗೆ ಸಾವಿರ ಚಿಂತೆಗಳ ಚಿತೆಯಲ್ಲಿ ಅವರ ಅಂತರಂಗ ಬೇಯುತ್ತ, ರಾತ್ರಿ ದಿಂಬಿಗೆ ತಲೆ ಕೊಟ್ಟ ಕ್ಷಣದಲ್ಲೇ ನಿದ್ರೆಯು ಅವರ ಎಚ್ಚರದಪ್ಪಿಸಿತ್ತು.