ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೦ ವೈಶಾಖ ಪಾಪನಿವಾರಣೆಯಾಗಲಿ, ಎಂಬುದು ಇನ್ನೊಂದು ಇಚ್ಚೆ. ಸುಬ್ಬಾವಧಾನಿಗಳ ಮಗ ಸುಬ್ರಹ್ಮಣ್ಯನ ಕೆಲಸದಾಳು ಸಾಕಿಯ ಕೈಯಿಂದ ಒಂದು ಘಟದಲ್ಲಿ ಅಶುದ್ಧವಾದ ನೀರು ತರಿಸಿದ್ದರು. ಹಾಗೆ ಆ ಸೇವಕಿಯು ಅಶುದ್ದ ಜಲ ತುಂಬಿ ತಂದ ಘಟವನ್ನು, ತುದಿ ಕರಿಸದ ದರ್ಭೆಗಳ ಹಾಸಿನ ಮೇಲೆ ಇಡುವಂತೆ ಮಾಡಿದರು. ಆ ಕ್ರಿಯೆಯು ಮುಗಿದ ಬಳಿಕ, ಆ ಬಂಧುಬಾಂಧವರೆಲ್ಲರೂ ತಂತಮ್ಮ ಶಿಖೆಗಳನ್ನು ಬಿಚ್ಚಿದರು. ಜನಿವಾರವನ್ನು ಎಡಭಾಗಕ್ಕೆ ಬದಲಿಸಿ, ಪ್ರಾಚೀನಾವೀತಿಯಾಗಿ ಹಾಕಿಕೊಂಡರು. ಅನಂತರ ಆ ಸೇವಕಿ ಸಾಕಿಯನ್ನು ಮುಟ್ಟಿ ನಿಂತರು. ಆಗ ಆ ಸೇವಕಿಯು ಆ ಘಟವನ್ನು ತನ್ನ ಎಡಗಾಲಿನಿಂದ ಒದೆದಳು. ಘಟದ ನೀರು ತುದಿ ಕತ್ತರಿಸಿದ ದರ್ಭೆಗಳ ಉರುಳಿ ಘಟಿ ಒಡೆಯಿತು..... ಅದಾದನಂತರ ಆ ಸೇವಕಿಗೆ ವೆಂಕಣ್ಣ ಜೋಯಿಸರು, “ನೋಡೆ ಸಾಕಿ, ನಮ್ಮ ಜೊತೆ ನೀನು ನಾವು ಹೇಳಿದ ಹಾಗೆ ಹೇಳಬೇಕು. ಹೇಳೀಯ?” ಎಂದರು. “ಆಗ್ಲಿ, ನೋಡಾನ. ಅದೆಂಗೆ ಯೋಳುಕಡಿ, ಪರ್ಯ ಮಾಡ್ತೀನಿ” ಎಂದು ಸಾಕಿ ಹೇಳಿದಳು. “ನೋಡೆ, ಹೀಗೆ ಹೇಳಬೇಕು: ಇನ್ನು ಮುಂದೆ ಈ ಪಾಪಿ ರುಕ್ಕಿಣಿಗೂ ನನಗೂ ಉದಕ ಸಂಬಂಧವಿಲ್ಲ... ಇಷ್ಟೆ, ಇಲ್ಲಿ ಹೇಳು ನೋಡೋಣ.....” ಸಾಕಿ ಹೇಳಲುಪಕ್ರಮಿಸಿದಳು: “ನೋಡೆ ಹಿಂಗೆ ಹ್ಯಾಳಬೇಕು......” ವೆಂಕಣ್ಣಜೋಯಿಸರು ಹಣೆ ಹಣೆ ಚೆಚ್ಚಿಕೊಂಡರು. “ಹಾಗಲ್ಲ. ಹೀಗೆ ಹೇಳು..... ಆ ಪಾಪಿ ರುಕ್ಕಿಣಿಗೂ ನನಗೂ ಉದಕ ಸಂಬಂಧವಿಲ್ಲ” ಸಾಕಿ ಪುನಃ ಪ್ರಯತ್ನಿಸಿದಳು. “ಹಂಗಲ್ಲ. ಹಿಂಗೇಳು..... ಮುಂದಕೆ?” -ಮುಂದೆ ಹೇಳಬಾಕಾದುದನ್ನು ಮರೆತು ಕೇಳಿದಳು. ಹೀಗೆಯೇ ಬಹಳ ಸಮಯ ಕಳೆದುಹೋಯಿತು. ವೆಂಕಣ್ಣ ಜೋಯಿಸರು ಅವಳಿಂದ ಆ ವಾಕ್ಯವನ್ನು ಹೇಳಿಸಲು ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತು. ಆಗ ಸುಬ್ಬಾವಧಾನಿಗಳು ಶಾಂತವಾಗಿ, “ಲೇ ಸಾಕಿ, ನಾನು ಹೇಳಿದ ಹಾಗೆ ಸುಮ್ಮನೆ ಗಂಭೀರವಾಗಿ ಹೇಳು.