________________
೩೬೬ ವೈಶಾಖ ಅವಳಿಗೆ ಅಸಮಾಧಾನವಿತ್ತು. ಅವರು ಈತನಷ್ಟು ಜೋರು ಮಾಡದಿದ್ದರೂ ಈತನ ಜೊತೆಗೆ ಇದ್ದುದೇ ಮಗುವಿನ ಮನಸ್ಸನ್ನು ಕೆಡಿಸಿತ್ತು. ಆ ಕಾಣದಿಂದಲೆ, ಅವರ ಮನೆಯಲ್ಲಿ ಅವರ ಹೆಣ್ಣುಮಕ್ಕಳಿಗೆ ಸರಸಿ ಒಗ್ಗಿಕೊಂಡಿದ್ದರೂ ಜೋಯಿಸರು ಪರಿಪರಿಯಲ್ಲಿ ಮುಸಿ ಮಾಡಿದರೂ ಅವರ ಬಳಿ ಸುಳಿಯುತ್ತಿರಲಿಲ್ಲ.... ಈಗ ಕೇಶವಯ್ಯ ತಮ್ಮ ಹಟ್ಟಿಗೆ ಬಂದು ಮಾವಯ್ಯನ ಕಾಲು ಹಿಡಿದಿದ್ದಾನೆ!.... ಅಮ್ಮ, ಅಮ್ಮ, ಆ ದಿನ ಅವನು ಏನು ಹಾರಾಡ್ತಿದ್ದ.... ಈಗ ಬಂದಿದಾನೆ ಮಾವಯ್ಯನ ಕಾಲು ಹಿಡಿಯೋಕೆ-ಒದೀಬೇಕು ಎಂದಿತು ಮಗುವಿನ ಅಂತರಾಳ, - ಕೃಷ್ಣಶಾಸ್ತಿಗಳಿಗೂ ಕಾಲು ಹಿಡಿದ ಕೇಶವಯ್ಯನನ್ನು ಹಾಗೇ ಝಾಡಿಸಿ ಒದೆಯಬೇಕೆಂದು ಮನಸ್ಸಾಯಿತು. ಕೋಪ ಎನ್ನುವುದು ಕೂಡ ಇನ್ನೊಂದು ರೀತಯ ಪಾಪ, ಎಂದು ತಮ್ಮನ್ನೇ ಹೇಗೊ ಸಮಾಧಾನಪಡಿಸಿಕೊಂಡರು. ಕೇಶವಯ್ಯ ಒರಲುತ್ತಿದ್ದ: “ನಾನು ನಿಮಗೆ ಶತಾಪರಾಧ ಮಾಡಿದ್ದೇನೆ, ಶಾಸ್ತ್ರಿಗಳೇ.... ಈಗ ನೀವು ಅದನ್ನೆಲ್ಲ ಮರೆತು ದೊಡ್ಡ ಮನಸ್ಸು ಮಾಡಿ ನನಗೊಂದು ಉಪಕಾರ ಮಾಡಬೇಕು, ಶಾಸ್ತಿಗಳೆ...” “ಮೊದಲು ನನ್ನ ಕಾಲು ಬಿಟ್ಟು, ಏಳು” ಎಂದ ಶಾಸ್ತ್ರಿಗಳ ಮಾತಿನಲ್ಲಿ ಇನ್ನೂ ಕೋಪ ಹೆಡೆಯಾಡುತ್ತಿತ್ತು. ಕೇಶವಯ್ಯ ಎದ್ದು ನಿಂತು, ಕೈ ಜೋಡಿಸಿ, “ಶಾಸ್ತಿಗಳೆ, ನನ್ನ ಹೆಂಡತಿಗೆ ಪ್ಲೇಗ್ ಆಗಿದೆ...” ಎಂದು ಹೇಳುತ್ತ ಗದ್ಗದಿತನಾದ. “ಗ್ರಹಚಾರ-ಅದಕ್ಕೆ ನಾನೇನು ಮಾಡುವ ಹಾಗಿದೆ?” ಶಾಸ್ತಿಗಳ ಧ್ವನಿ ಇನ್ನೂ ಗಡುಸಾಗೇ ಇತ್ತು. “ಅವಳ ಜೀವ ಈಗ ನಿಮ್ಮ ಕೈಯಲ್ಲೇ ಇದೆ... ನಿಮ್ಮ ಹತ್ತಿರ ಕುಪ್ಪಿ ಮಾತ್ರೆ ಇದೆಯಲ್ಲ?- ಅದನ್ನು ಉಪಯೋಗಿಸಿ ದಯಮಾಡಿ ನನ್ನ ಹೆಂಡತಿ ಜೀವವನ್ನ ಉಳಿಸಿಕೊಡಿ.” “ನನ್ನಲ್ಲಿ ಕುಪ್ಪಿ ಮಾತ್ರೆ ಇರೋದು ಸಹಜ. ಅದು ನಮ್ಮಜ್ಜನ ಕಾಲದ್ದು. ಇದನ್ನು ಉಪಯೋಗಿಸೋದು ನಮ್ಮ ತಂದೆಯವರಿಗೂ ಸರಿಯಾಗಿ ತಿಳಿದಿರಲಿಲ್ಲ. ಅವರು ಜ್ವರ ಬಂದೋರಿಗೆ ಗಂಧದ ಕಲ್ಲಿನ ಮೇಲೆ ಜೇನುತುಪ್ಪದ ಸಮೇತ ಇದನ್ನ ಮೂರು ಸುತ್ತು ತೇದು ನೆಕ್ಕಿಸೋರು. ಅಜ್ಜನಿಂದ ನಮ್ಮ ತಂದೆ ಕಲಿತಿದ್ದದ್ದು ಅಷ್ಟೇ. ಅಜ್ಜ ಕಲಿಸಲು ತಯಾರಿದ್ದರೂ ನಮ್ಮ ತೀರ್ಥರೂಪರವರಿಗೆ ಕಲಿಯುವ ಆಸಕ್ತಿಯಿರಲಿಲ್ಲವಂತೆ. ನಮ್ಮ ತಂದೆಗೆ ಕುದುರೆ ಸವಾರಿ, ಕುಸ್ತಿ ಇಂಥವುಗಳಲ್ಲಿ