ಪುಟ:ವೈಶಾಖ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ವೈಶಾಖ ಕೆಲಸ ಮಾಡುವುದರಲ್ಲಿ ಹೇಗೋ ಇವರ ಮಗನೂ ಸಹ ಊಟೋಪಚಾರಗಳಲ್ಲಿ ಇವರಂತೆಯೇ ಗಟ್ಟಿಗರು ಎನ್ನುವ ಸಾಮ್ಯ ಹೊಳೆಯಿತು. ಒಂದೊಂದು ದಿನ ವ್ಯವಧಾನವಿಲ್ಲದ್ದಕ್ಕೆ ತಾನು ಅಪರೂಪವಾಗಿ ಮಾಡಿ ಬಡಿಸುತ್ತಿದ್ದ ತಿಳಿಸಾರು ಅನ್ನವನ್ನೆ ಅತಿಶಯವಾದ ತೃಪ್ತಿಯಿಂದ ಅದೇ ಅಮೃತವೆನ್ನುವಂತೆ ತನ್ನವರು ಊಟ ಮಾಡುತ್ತಿದ್ದುದು ನೆನಪಾಯಿತು. 'ಒಳ್ಳೆಯವರನ್ನು ದೇವರು ಬಹುಬೇಗ ತನ್ನಲ್ಲಿಗೆ ಕರೆದುಕೊಳ್ಳುತ್ತಾನೆ' ಎಂದು ಅಜ್ಜಿ ಆಗಾಗ ಹೇಳುತ್ತಿದ್ದ ಉಕ್ತಿಯೂ ಜ್ಞಾಪಕಕ್ಕೆ ಬಂತು. ಬೇಳೆ ಬೆಂದದ್ದನ್ನು ಗಮನಿಸಿ, ಸಂಬಾರದ ಪುಡಿಯನ್ನು ಬೋಸಿಗೆ ಹಾಕಿದಳು. ಮಧ್ಯಾಹ್ನ ತೋಟದ ಕೊಳದಲ್ಲಿ ಬಟ್ಟೆ ಒಗೆಯುವಾಗಲೂ ರುಕ್ಕಿಣಿಗೆ ತನ್ನವರದೇ ಚಿಂತೆ... ಈ ತೋಟ ಈ ಸ್ಥಿತಿ ಮುಟ್ಟಲು ತಂದೆಯ ಜೊತೆಗೆ ಮಗನ ಆಸಾದಾರಣ ಶ್ರಮವೋ ಸೇರಿದ್ದಿತೆಂದು ದರುಮನಳ್ಳಿ ಜನ ಆಡಿಕೊಳ್ಳುತ್ತಿದ್ದುದುಂಟು. ಸಂಸ್ಕೃತಿ, ವೇದಾಧ್ಯಯನಗಳಲ್ಲದೆ, ಶಾಲಾ ಕಾಲೇಜು ಮೆಟ್ಟಿಲು ತುಳಿದವರಲ್ಲ, ಇವರು. ಹೀಗಿರುವಾಗ ಒಂದು ದಿನ ಇವರು ನಮ್ಮ ಊರಿನ ಮಾರಿಗುಡಿಯ ಮುಂದೆ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರಂತೆ. ಪರಿವಾರ ಜಾತಿ ಸಣ್ಣ ತಲೆಯ ಮೇಲೆ ಒಂದು ಕೊಡ, ಕಂಕುಳಲ್ಲಿ ಒಂದು ಕೊಡ ನೀರು ಹೊತ್ತು ಇವರ ಸನಿಯದಲ್ಲೆ ಸಾಗುತ್ತಿದ್ದಳಂತೆ. ಮಾರಿಗುಡಿಯ ಪೋಲಿ ಪಟಾಲಮ್ಮಿನಲ್ಲಿ ಒಬ್ಬನಾದ ರುದ್ರ, ಸಣ್ಣೆಯನ್ನೇ ದುರುಗುಟ್ಟಿ ನೋಡುತ್ತ, ಕೆಣಕುವ ದನಿಯಲ್ಲಿ “ಕ್ವಾಡ್ರಪ್ಪ ಚೋಜಿಗವ!- ತಲೆಮ್ಯಾಗಿನ ಕೊಡ ಸೊಂಚದ ಕೊಡ, ಇವು ಏಡಂಕಿಂತಲೂವೆ ಎದೆಮ್ಯಾಗಿನ ಕೊಡಗಳೇ ಭಾರವಾಗಿರಾ ಅಂಗವಲ್ಲ!” ಅಂದನಂತೆ. ಅವನ ಪಟಾಲಮ್ಮೆಲ್ಲ ಆ ಕೀಟಲೆ ಮಾತು ಕೇಳಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿ, ಅಸಹ್ಯವಾಗಿ ನಕ್ಕರಂತೆ... ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿದ್ದರೂನು, ಈ ಆಶ್ಲೀಲದ ಮಾತು ಕೇಳಿ ತನ್ನ ಯಜಮಾನರಿಗೆ ಸಹಿಸಲಾರದ ಸಿಟ್ಟು ಬಂದು, ರುದ್ರನ ಕತ್ತಿನ ಪಟ್ಟಿ ಹಿಡಿದೆಳೆದು, ಅವನ ಎರಡು ಕೆನ್ನೆಗಳಿಗೂ ರಪರಪ ತೀಡಿ, “ಹುಶಾರ್, ಇನ್ನೊಂದು ಸಲ ಹೆಣ್ಣುಮಕ್ಕಳನ್ನ ಹೀಗೆ ಹಾದಿಬೀದೀಲೆಲ್ಲ ಚುಡಾಯಿಸಿದರೆ, ನಿನ್ನ ಚರ್ಮ ಸುಲಿದು ಊರ ಬಾಗಿಲಿಗೆ ತೋರಣ ಕಟ್ಟಿಬಿಡ್ತೀನಿ”