ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಮೊನ್ನೆ ಅರಳೀಕಟ್ಟೆ ಮೇಲೆ ನಂಜೇಗೌಡ, ಗಂಗಪ್ಪ ಇನ್ನೂ ಯಾರುಯಾರೊ ಯಜಮಾನರು ಕೂತು ಮಾತಾಡಿಕೊಳ್ತ ಇದ್ದದ್ದನ್ನ ನಾನೇ ಸ್ವತಃ ಕೇಳಿ ಬಂದಿದ್ದೇನೆ. ಇದಕ್ಕೆ ಇನ್ನೂ ಬೇರೆ ಪುರಾವೆ ಬೇಕಾ?” ಎಂದು ನನ್ನನ್ನು ಒಂದು ತರಹ ನೋಡಿದಳು. ಆ ನೋಟದಲ್ಲಿ ನನಗೆ ಗಂಡ ಇಲ್ಲದೇ ಇರೋದೂ ಒಂದೆ, ನಿನಗೆ ಗಂಡ ಇರೋದು ಒಂದೆ ಎಂಬ ಭಾವವನ್ನು ಅದೇಕೋ ನನ್ನ ಆಂತರ್ಯ ಗುರುತಿಸಿತು... ನಂಜೇಗೌಡ ಗಂಗಪ್ಪನಂಥವರು ಈ ಸುದ್ದಿಯನ್ನು ಹರಡುತ್ತಿದ್ದುದರಿಂದ ರುಕ್ಕಿಣಿಯು ಇದಕ್ಕೆ ಅಷ್ಟೇನೂ ಪ್ರಾಮುಖ್ಯತೆ ಕೊಡದಿದ್ದರೂ, ಇಂಥ ವಿಷಯಗಳಲ್ಲಿ ಹೆಣ್ಣಿಗೆ ಸಹಜವಾದ ಅನುಮಾನ ಅವಳಲ್ಲಿ ಮೂಡದೆ ಇರಲಿಲ್ಲ. ಆದರೆ ಗಂಡನ ಸಂಗಡ ಈ ವಿಚಾರ ಪ್ರಸ್ತಾಪಿಸಲು ಅಂಜಿಕೆ... ಹೆಣ್ಣು ಎಂದರೆ ಹೆಬಗನೂ ನಕ್ಕ ಎನ್ನು ಗಾದೆಯೇ ಇಲ್ಲವೆ?... ಒಂದು ಪಕ್ಷ ನಾನು ಕೇಳೇಬಿಟ್ಟೆ ಅನ್ನೋಣ. ಆಗ ಅವರು, 'ಹೌದು, ನಿಜ. ಆ ಹೆಣ್ಣು ನನಗೆ ಪ್ರಿಯವಾಯಿತು. ಆದರಿಂದ ನಿನಗೇನು ಕೊರತೆ ಮಾಡಿದ್ದೇನೆ?' ಎಂದುಬಿಟ್ಟರೆ?... ನಮ್ಮ ಬ್ರಾಹ್ಮಣಕೇರಿ ಮಾತ್ರವಲ್ಲದೆ, ಊರಿನ ಬೇರೆ ಬೇರೆ ಕೇರಿಗಳ ಅದೆಷ್ಟು ಮಂದಿ ಗೃಹಸ್ಥರು, ಇದೇ ಕೆಲಸ ಮಾಡುತ್ತಿಲ್ಲ?!... ನನ್ನ ಮನಸ್ಸು ಇದೇ ವರ್ತುಲದಲ್ಲಿ ಚಲಿಸುತ್ತಿರುವಾಗ, ಸುಶೀಲ ಇನ್ನೊಂದು ದಿನ ಇದೇ ವಿಷಯ ಪ್ರಸ್ತಾಪ ಮಾಡಿ, “ಅಯ್ಯೋ, ಅದೇನು ಕೇಡುಗಾಲ ಬಂದಿದೆಯೋ ನಮ್ಮ ವಿಶ್ವನಿಗೆಎಂದು ಪೀಠಿಕೆ ಹಾಕಿದಳು. ನಾನು ಬೇಸರದಿಂದ ಮೌನವಾಗಿಯೇ ಇದ್ದೆ. ಅವಳು ಮಾತ್ರ ಮಾತುಗಳನ್ನು ಉರುಳಿಸುತ್ತಲೇ ಹೋದಳು. “ಆ ಸಣ್ಣಿ ತೋಟದಲ್ಲಿ ತಲೆ ಸುತ್ತಿತ್ತು ಎಂದು ದೊಪ್ಪನೆ ನೆಲಕ್ಕೆ ಬಿದ್ದಳಂತೆ. ಎಲ್ಲ ಆಳುಗಳೂ ಅಲ್ಲೆ ಇರುವಾಗ ನಮ್ಮ ವಿಶ್ವ ಓಡಿಹೋಗಿ ಅವಳ ಸೊಂಟಕ್ಕೆ ಕೈ ಕೊಟ್ಟು ತಬ್ಬಿ ಶೈತ್ಯೋಪಚಾರ ಮಾಡಿದನಂತೆ...!” ಎಂದು ವಿಷಯಕ್ಕೆ ಮತ್ತೊಂದು ಹೊಸ ಆಯಾಮವನ್ನೆ ನಿರ್ಮಿಸಿದ್ದಳು... ಕೆಲವು ದಿನಗಳಿಂದ ನನ್ನೊಳಗೆ ಒಲೆಯ ಮೇಲಿನ ಹಾಲು ಕುದಿಯುವಂತೆ ಕುದಿಯುತ್ತಿದ್ದ ಬೇಗೆ, ಒಂದು ದಿನ ನನ್ನವರ ಮುಂದೆ ಕಂಬನಿದುಂಬಿ ಪ್ರತ್ಯಕ್ಷವಾಯಿತು. “ಯಾಕೆ ರುಕ್ಕು? -ಏನಾಯಿತು?... ನಿನ್ನ ಕಣ್ಣಲ್ಲಿ ಯಾಕೆ ನೀರು?” - ಯಜಮಾನರು ಏನೂ ಅರಿಯದವರಾಗಿ ಕೇಳಿದರು.