ಪುಟ:ವೈಶಾಖ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೭೧ ಶರೀರ ಮಾತ್ರ ಯಾವಾಗಲೂ ನರಪೇತಲನಂತೆ ಕೃಶವಾಗಿಯೇ ಇರುತ್ತಿತ್ತು. ಅದಕ್ಕೇ ಊರಿನ ಕೆಲವು ಗೆಳೆಯರು ಅಶ್ವತ್ಥ ಎಂದು ಕರೆಯುವ ಬದಲು ಹಾಸ್ಯವಾಗಿ 'ಅಸ್ವಸ್ಥ' ಎಂದೇ ಗೇಲಿ ಮಾಡುತ್ತಿದ್ದರು... ಈ ಮನೆಯಲ್ಲಿ ಹಿಂದೆ ಹಲವಾರು ವರ್ಷ ಅನುಭವಿಸಿದ್ದುದೇ ರುಕ್ಕಿಣಿಗೆ ಸಾಕೆನಿಸಿತ್ತು. ಈಗ ಮತ್ತೆ ಇದೇ ಮನೆಯಲ್ಲಿ ತನ್ನ ವಾಸ!- ಈ ಸೆರೆ ತಪ್ಪಲು ಇನ್ನೆಷ್ಟು ಕಾಲ ಹಿಡಿಯುವುದೊ!... ಮಾವನವರು ಕೆಲಕಾಲ ಎಂದಿದ್ದಾರೆ. ಸುಶೀಲತೆಗೂ ದೇವರು ಒಳ್ಳೆಯ ಬುದ್ದಿ ಕೊಡಬಹುದು- ಈ ನಿರೀಕ್ಷೆಯಲ್ಲೇ ರುಕ್ಕಿಣಿ ಕಾಲ ದೂಡುತ್ತಿದ್ದಳು. ಈಚೆಗೆ, ತಾನು ರುದ್ರಪಟ್ಟಣಕ್ಕೆ ಹೋದ ತರುಣದಲ್ಲಿ, ಸಾತು ಹರಟೆ ಹೊಡೆಯಲು ನೆರೆಮನೆಗೆ ತೆರಳಿದ್ದಳು. ಅಶ್ವತ್ಥಣ್ಣ ಯಾವುದೊ ಕಾರಾರ್ಥವಾಗಿ ಹೊಳೆಯಾಚೆಗಿನ ಬಸವಾಪಟ್ಟಣಕ್ಕೆ ಹೋಗಿದ್ದ. ಶಾಲೆಯಲ್ಲಿ ಕಲಿಯುತ್ತಿದ್ದ ಇವರ ಹಿರಿಯ ಮಗಳು ಜಾನಕಿಯೂ, ರುದ್ರಪಟ್ಟಣದಲ್ಲಿ ಇನ್ನೂ ಮಿಡಲ್ ಸ್ಕೂಲ್ ಇಲ್ಲದ್ದರಿಂದ, ಹಿಂದೆ ತಾನು ಹೋಗುತ್ತಿದ್ದಂತೆ, ಬಸವಾಪಟ್ಟಣಕ್ಕೆ ಹೋಗಿದ್ದಳು. ಇವರ ಎರಡನೇ ಮಗ ಶೇಷನ ವಿದ್ಯಾಭ್ಯಾಸ ನಡೆಯುತ್ತಿದ್ದುದೂ ಬಸವಾಪಟ್ಟಣದಲ್ಲಿ. ಆದರೆ ಅಲ್ಲಿಗೆ ಹೋಗುವೆನೆಂದು ಹೇಳಿ, ಮೇಲಿಂದ ಮೇಲೆ ಅವನು ದೇವಾಂಗದ ಬೈಸೆಟ್ಟಿ, ಮರಾಠಿಗರ ಹಿರೋಜಿ, ಅಂಬಿಗರ ಸಂಜೀವ, ಮುಸಲ್ಮಾನರ ಸಾಬೂಲಾಲ್, ಗುಡಿವಠಾರದ ರಾಮಸ್ವಾಮಯ್ಯಂಗಾರರ ಮಗ ಶಿನ ಮೊದಲಾದವರ ಜೊತೆಗೂಡಿ ಶಾಲೆಗೆ ಚಕ್ಕರ್ ಹೊಡೆದು ಪೋಲಿ ಅಲೆಯುತ್ತಿದ್ದ. ಮಗನ ಈ ಚರ್ಯೆ ಅತ್ತಿಗೆಯ ಕಿವಿಗೆ ಬಿದ್ದಿರಲಿಲ್ಲವೆಂದೇನಲ್ಲ ಅವಳು ಅವನನ್ನು ಮನೆಯಲ್ಲಿ ಕಟ್ಟಿಹಾಕಿ ಕೋಲಿನಿಂದ ಥಳಿಸಿ ನೋಡಿದ್ದಳಂತೆ-ಕೋದಂಡ ಎತ್ತಿ ಮೆಣಸಿನಕಾಯಿ ಘಾಟು ಕೊಟ್ಟು ನೋಡಿದ್ದಳಂತೆ. ಆದರೆ ಆ ಪ್ರಚಂಡ ಇಂಥ ಯಾವ ಶಿಕ್ಷೆಗೂ ಮಣಿದಿರಲಿಲ್ಲ. ಪ್ರತಿಯಾಗಿ ಅವನ ಹಟಮಾರಿತನ, ವಿರೋಧಗಳು ಇನ್ನೂ ಪ್ರಬಲವಾಗುತ್ತ ನಡೆದಿದ್ದವು. ಹೀಗಿದ್ದೂ ಯಾರಾದರೂ ಅವನ ಪುಂಡಾಟಿಕೆಯ ಬಗ್ಗೆ ದೂರು ತಂದರೆ ಸಾತು ಮಗನನ್ನು ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. “ಏನೋ ಎಡಹುವ ಕಾಲು, ಎಡವಿದ, ಬೆಳೆದಂತೆ ಸರಿಹೋಗುತ್ತಾನೆ” ಎಂದು ಜಾರಿಸಿ ಬಿಡುತ್ತಿದ್ದಳು... ಈ ಶೇಷ ತಾನು ರುದ್ರಪಟ್ಟಣಕ್ಕೆ ಬಂದಾಗಿನಿಂದಲೂ ತನ್ನ ಮೇಲೆ ಗುರ್ ಎನ್ನುವುದೇ ಆಗಿತ್ತು. ಇದಕ್ಕೆ ಕಾರಣ ಇಷ್ಟೆ: ಒಂದು ಸಂಜೆ ರವೆ ಉಂಡೆ, ಕೋಡುಬಳೆ ತಯಾರಿಸಿ ಬುಟ್ಟಿಯಲ್ಲಿ ತುಂಬಿ ಸಾತು ಎಲ್ಲೋ ಹೊರಗೆ ನಡೆದಿದ್ದಳು.