ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ಆಗ ಶೇಷ ಹಾಜರಾಗಿ ಆ ತಿಂಡಿ ತುಂಬಿದ ಬಿದಿರುಬುಟ್ಟಿಗೆ ಕೈಯಿಡಲು ಯತ್ನಿಸಿದ್ದ. ಅವನು ಅಲ್ಲೇ ಕುಳಿತು ತಾನೊಬ್ಬನೆ ತನಗೆ ಬೇಕೆನ್ನುವಷ್ಟು ತಿಂದಿದ್ದರೆ ನಾನೇನೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಅವನು ಒಂದು ಬಟ್ಟೆ ಕೈಚೀಲ ತಂದು, ಬುಟ್ಟಿಯಲ್ಲಿದ್ದ ತಿನಿಸನ್ನೆಲ್ಲ ಅದರೊಳಗೆ ಸುರಿದು ತನ್ನ ಸ್ನೇಹಿತರಿಗೆಂದು ಕೊಂಡುಹೋಗುತ್ತಿರುವಾಗ ನಾನು ಅಡ್ಡ ನಿಂತು- “ಹೀಗೆ ಮಾಡಬೇಡಿ ಶೇಷ, ನೀನಿದ್ದೂ ಈ ದಾಂಧಲೆಗೆ ಹೇಗೆ ಅವಕಾಶ ಕೊಟ್ಟೆ? ಎಂದು ಅಮ್ಮ ಕೇಳಿದರೆ ಆಗ ನಾನೇನು ಹೇಳಬೇಕು?” ಎಂದೆಲ್ಲ ಬೇಡಿದೆ. ಅವನು ಕುಪಿತನಾಗಿ ಅಡ್ಡನಿಂತ ನನ್ನನ್ನು ಜೋರಿನಿಂದ ತಳ್ಳಿ ಹೊರ ನಡೆದಿದ್ದ ಸಾತು ಬಂದಾಗ ನಡೆದುದನನೆಲ್ಲ ವಿವರಿಸಿದೆ. ಅವಳು ಅದಕ್ಕೆ ಏನು ಹೇಳಬೇಕು? “ಏನೇ, ನನ್ನ ಮಗನ ಮೇಲೆ ಚಾಡಿ ಹೇಳಲಿಕ್ಕೆ ಶುರು ಮಾಡಿಬಿಟ್ಟಿಯೇನೆ?ಅವನೆಲ್ಲೋ ತನ್ನ ಸ್ನೇಹಿತರಿಗೆ ಎಂದು ಕೊಂಚ ತಗೊಂಡುಹೋಗಿರಬಹುದು. ನಾ ಇಲ್ಲ ಅನ್ನಲ್ಲ. ಆದರೆ ಆ ನೆಪದಲ್ಲಿ ನೀನೇ ಎಷ್ಟು ಸ್ವಾಹಾ ಮಾಡಿರಬಹುದು? - ಅದನ್ನೇಕೆ ಹೇಳಲ್ಲ?” ಯಾರಾದರೂ ಅನ್ಯಾಯ ಮಾತಾಡಿದಾಗ ನನಗೆ ಯಾಕೆ ಹೀಗೆ ಕಣ್ಣಿನಲ್ಲಿ ನೀರು ತುಂಬುತ್ತೋ, ಹಾಳು!- ಗಟ್ಟಿಯಾಗಬೇಕು.... ಸಮಾಧಾನ ಮಾಡಿಕೊಳ್ಳುತ್ತ, ಕಂಬಿನಿಯನ್ನು ಸೀರೆಯ ಸೆರಗಿನಿಂದ ಒತ್ತಿ, “ಇಲ್ಲ, ಸಾತು. ನಾನು ನಿನಗೆ ಹೇಳಿದ್ದರಲ್ಲಿ ರವೆಯಷ್ಟೂ ಸುಳ್ಳಲ್ಲ. ಬೇಕಾದರೆ ಗೋಡೆಗೆ ನೇತುಹಾಕಿರುವ ಆ ಕೋದಂಡರಾಮನ ಪಟ ತೆಗೊ. ಅದನ್ನು ಮುಟ್ಟಿ ಪ್ರಮಾಣ ಮಾಡ್ತೀನಿ” ಎಂದೆ. “ಹೋಗೆ, ಹೋಗೆ, ದನ ತಿನ್ನೋನಿಗೆ ಗೊಬ್ಬರದ ಆಣೆ ಅನ್ನೋ ಹಾಗೆ, ನಿನ್ನ ಪ್ರಮಾಣ ಒಂದು ಕೇಡು"- ಸಾತು ಹೀಗೆ ನನ್ನ ಮಾತನ್ನು ಒಪ್ಪಲೇ ಇಲ್ಲ... ಇದೇ ಚಿಂತೆಯಲ್ಲಿ ಮುಳುಗಿದ್ದಾಗ ತನ್ನ ದೌರ್ಬಲ್ಯಕ್ಕಾಗಿ ತನ್ನ ಮೇಲೆ ತನಗೇ ಕೋಪ ಬಂದಿತು. ಧೂ, ಮಾವಯ್ಯನ ನೋಡಿಯಾದರೂ ತಾನು ಕಲಿಯಬಾರದೆ? ಎಂತಹ ಸನ್ನಿವೇಶದಲ್ಲೂ ಅವರದು ಅದೇನು ಧೀರಗಂಭೀರ ನಿಲುವು!... ಇನ್ನು ಮುಂದೆ ತಾನೂ ಸಹ-ಹೇಳಿಕೊಳ್ಳುತ್ತಿದ್ದಂತೆ, ಅಯ್ಯೋ ಸಿಂಹಸದೃಶರಾದ ಅವರ ವ್ಯಕ್ತಿತ್ವಕ್ಕೂ ತನಗೂ ಎಲ್ಲಿಯ ಹೋಲಿಕೆ? ಎಂದೆನ್ನಿಸಿ, ನಿಸ್ತೇಜಳಾಗಿ ನಕ್ಕಿದ್ದಳು.... ಯೋಚನೆ, ಯೋಚನೆ, ಯೋಚನೆ. ಇದರಿಂದ ಮುಕ್ತಳಾಗುವುದಾದರೂ ಹೇಗೆ?... ಮನಸ್ಸನ್ನು ಈ ಯೋಚನೆಗಳಿಂದ ಕಿತ್ತು ಬೇರೆ ಏನಾದರೂ ಕೆಲಸದಲ್ಲಿ