ಪುಟ:ವೈಶಾಖ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ತುಂಡುಗೋಡೆಯಾದ್ದರಿಂದ ಇದು ಸಾಧ್ಯವಾಗಿತ್ತು. ಅಲ್ಲದೆ, ತನ್ನ ಮಾತು ಯಾರಿಗಾದರೂ ಕೇಳಿಸೀತು ಎನ್ನುವ ಕಳವಳವಿಲ್ಲದ, ಜೋರಿನಿಂದ ಸಂಭಾಷಿಸುವ ಗತ್ತು ಸಾವಿತ್ರಿಯದು.... ಮೃದುವಾಗಿ ಅಣ್ಣ ಕೇಳುತ್ತಿದ್ದ: “ನೀನೇ ಅಲ್ಲವೇನೆ ಸಾತು, ರುಕ್ಕನ ಇಲ್ಲೆ ಇರಲಿ ಅಂತ ಇರಿಸಿಕೊಂಡದು...” ಅತ್ತಿಗೆ ನೊಂದ ದನಿಯಲ್ಲಿ ಉಸುರಿತ್ತಿದ್ದಳು: “ಹೌದು,” ನಾನೇ ಆ ತಪ್ಪು ಮಾಡಿದ್ದು, ದರುಮನಳ್ಳಿಯಿಂದ ಕೃಷ್ಣಶಾಸ್ತ್ರಿಗಳು ಈ ರುಕ್ಕಿಣಿನ ಕರೆದು ತಂದ ದಿನ ನನಗೆ ಮಹದಾನಂದವೇ ಆಗಿತ್ತು. ಸುಳ್ಳಲ್ಲ. ನಾನು ಬಾಣಂತಿ. ಇವಳು ಸ್ವಲ್ಪ ಕಾಲ ಇದ್ದರೆ ನನಗೂ ಉಪಕಾರವಾಗುತ್ತೆ ಅಂತ ಒಪ್ಪಿದೆ. ನಮ್ಮ ಅಮ್ಮನೂ ಕೂಡ ನನ್ನ ತಂದೆಗೆ ಹುಶಾರಿಲ್ಲದ ಪ್ರಯುಕ್ತ ಇಲ್ಲಿಗೆ ಬಂದು ಒಂದು ತಿಂಗಳು ಪೂರ್ತಾ ಇರಲಾರದೆ ಅರಕಲಗೂಡಿಗೆ ಹೊರಟು ಹೋದದ್ದು ನಮಗೂ ಗೊತ್ತೇ ಇದೆಯಲ್ಲ!... ಅಂಥ ಸಂದರ್ಭದಲ್ಲಿ ಒಪ್ಪದೆ ನಾನೇನು ಮಾಡಬಹುದಿತ್ತು?” ಅತ್ತಿಗೆಯ ಸ್ವಭಾವ ತಿಳಿದೂ ತಿಳಿದೂ ತಾನು ಇಲ್ಲಿಗೆ ಬರಬಾರದಾಗಿತ್ತು ಎನ್ನಿಸಿದರೂ ತನ್ನ ಬಾಳ್ವೆಯ ಸಂದಿಗ್ಗದ ಅರಿವಾಗಿ, ಇದೊಂದು ತಾಣವಲ್ಲದೆ ಬೇರೆ ಯಾವ ಜಾಗ ತನಗೆ ಆಶ್ರಯ ನೀಡುತ್ತಿತ್ತು ಎಂದು ಸ್ಮರಿಸುತ್ತ, ಸೌದೆಯ ಸೀಳುಗಳ ಮೇಲೆ ಯಾಂತ್ರಿಕವಾಗಿ ಕೈಯಾಡಿಸಿದ್ದಳು ರುಕ್ಕಿಣಿ... ಅತ್ತ ದಂಪತಿಗಳ ಸಂಭಾಷಣೆ ಮುಂದುವರೆದಿತ್ತು... “ಇನ್ನೂ ಎರಡು ಮೂರು ತಿಂಗಳು ಅರಕಲಗೂಡಿನಲ್ಲಿ ಇದ್ದು ಬರಬಹುದಿತ್ತಲ್ಲ. ನಾನೂ ಹೇಗೋ ಮಕ್ಕಳಿಗೆ ಬೇಯಿಸಿ ಹಾಕಿ, ನೀನು ಬರುವವರೆಗೂ ಕಾಲಯಾಪನೆ ಮಾಡುತ್ತಿದ್ದೆ...” ಅಣ್ಣನಿಗೆ ಕೆಲ ಜನರಂತೆ ಹೇಳಿದ್ದನ್ನೆ ಹೇಳುವುದು ರೂಢಿ. ಅತ್ತಿಗೆಗೆ ಈ ಸಮಜಾಯಿಷಿಯನ್ನು ಅದೆಷ್ಟು ಬಾರಿ ಹೇಳಿದ್ದನೊ, ಲೆಕ್ಕ ಹಿಡಿಯೋದು ಕಠಿಣ. “ಅಲ್ಲಿ ನನ್ನ ತಂಗಿ ಸರೋಜ ಬೇರೆ ತುಂಬುಗರ್ಭಿಣಿಯಾಗಿ ತೌರು ಸೇರಿದ್ದಳು. ನನ್ನ ತಂದೆಯ ಉಬ್ಬಸದ ಕಾಯಿಲೆ, ನನ್ನ ತಂಗಿಯ ಬಸಿರು, ಇಷ್ಟೆಲ್ಲ ಕೋಟಲೆಗಳಿದ್ದರೂ ಕೂಡ ತಮ್ಮ ಮನೇಲಿ ನನ್ನನ್ನ ಒಂದೂವರೆ ತಿಂಗಳು ಇರಿಸಿಕೊಂಡು ಬಾಣಂತಿಖಾರ ಲೇಹ್ಯ ಎಲ್ಲವನ್ನೂ ನನ್ನ ತಾಯಿಯೇ ಸ್ವತಃ ತಯಾರಿಸಿ ಉಪಚರಿಸಿದ್ದು ಏನು ಕಡಿಮೆಯೆ?... ನೀವೂ ಕಂಡ ಹಾಗೆ, ನಮ್ಮ ತಾಯಿಯೇನು ಈವೊತ್ತಿನವರೆ? ಅವರಿಗೂ ಹೋದ ಗೌರಿಗೆ ಎಪ್ಪತ್ತು