ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨ ವೈಶಾಖ ಕಂಡು ವಿಸ್ಮಯಪಟ್ಟೆ, ಸದಾ ಖುಷಿಯಾಗಿ ಹಕ್ಕಿಯಂತೆ ಯಾವುದಾದರೂ ಹಾಡು ಗುನುಗುತ್ತ (ಜಾನಕಿಯದು ಮಧುರವಾದ ಕಂಠ, ಅವಳಿಗೆ ಸಂಗೀತ ಪಾಠ ಹೇಳಿಸದೆ ಸಾತು ಅನ್ಯಾಯ ಮಾಡಿದ್ದಳು) ಬರುತ್ತಿದ್ದ ಹುಡುಗಿ, ಈ ದಿನ ತಲೆಗೂದಲೆಲ್ಲ ಕೆದರಿ ಅಸ್ತವ್ಯಸ್ತವಾದ, ಬೆದರುಗಣ್ಣು ಬಿಡುತ್ತಬಂದುದು ನನ್ನನ್ನು ಇನ್ನೂ ಅಧಿಕ ಆತಂಕದಲ್ಲಿ ಕೆಡವಿತ್ತು. “ಯಾಕಮ್ಮ ಜಾನಿ, ಹೀಗಿದ್ದೀಯ?.... ಏನಾಯಿತು?.... ಯಾಕಿಷ್ಟು ಗಾಬರಿಗೊಂಡಿದೀಯೆ?” ಅತ್ಯಾತುರವಾಗಿ ಕೇಳಿದ್ದೆ. ಜಾನಕಿ ನಿರುತ್ತರಳಾಗಿ ನನ್ನನ್ನು ತಬ್ಬಿ ನನ್ನೆದೆಗೆ ತನ್ನ ತಲೆಯಾನಿಸಿ ಗಳ ಗಳ ಅತ್ತಳು. ನನಗೆ ದಿಕ್ಕೇ ತೋಚದಾಯಿತು... ಜಾನಿ ಯಾಕೆ ಮಾತು ಆಡುತ್ತಿಲ್ಲ?.... ಯಾಕೆ ಹೀಗೆ ಸುಮ್ಮನೆ ಕಣ್ಣೀರ್ಗರೆಯುತ್ತಿದ್ದಾಳೆ?... ಇವಳಿಗೆ ಆಗಿರುವುದಾದರೂ ಏನು?... ಅವಳ ಬೆನ್ನು ಸವರುತ್ತ, “ಅಳಬೇಡ, ತಾಯಿ. ಏನಾಗಿದೆ ಹೇಳು” ಎಂದು ಸಂತೈಸುತ್ತಿರುವಂತೆ, ಅವಳ ಹಿಂದಿನಿಂದ ಶ್ಯಾಮನೂ ಅವಳ ಪುಸ್ತಕದ ಕೈಚೀಲ ಹಿಡಿದು ಒಳಗೆ ಕಾಲಿಟ್ಟಿದ್ದು ರುಕ್ಕಿಣಿಗೆ ಮತ್ತೂ ಸೋಜಿಗವೆನಿಸಿತು. ಶ್ಯಾಮ ಬಂದವನೆ, ಕೈಚೀಲವನ್ನು ಮರದ ಸಂದೂಕಿನ ಮೇಲಿಟ್ಟು ಸನ್ನೆಮಾಡಿ, ಅವಳನ್ನು ಬೇಗ ಮಲಗಿಸು ಎಂದಷ್ಟೇ ಹೇಳಿದ, ಬಿಕ್ಕಿ ಬಿಕ್ಕಿ ಅಳುತ್ತಿದ್ದ ಜಾನಿಯನ್ನು ತಬ್ಬಿದಂತೆಯೆ ಮೃದುವಾಗಿ ಕರೆದೊಯ್ದು ಅವಳೂ ಶೇಷನೂ ಮಲಗುವ ಕೊಠಡಿಯಲ್ಲಿ ಹಾಸಿಗೆ ಬಿಡಿಸಿ ಮಲಗಿಸಿದೆ. ನಾನು ಹೊರಗೆ ಬಂದಾಗ ನನ್ನನ್ನು ಒಂದು ಪಕ್ಕಕ್ಕೆ ಕರೆದು ನಡೆದ ಸಂಗತಿ ಎಲ್ಲವನ್ನೂ ಶ್ಯಾಮ ವಿವರಿಸಿ ಹೇಳಿದ್ದ. ವಿವರಿಸುತ್ತಿರುವಂತೆ ಅವನೇ ಗದ್ಗದಿತನಾಗುತ್ತಿದ್ದ: ನೆನ್ನೆ ರಾತ್ರಿಯೇ ಶ್ಯಾಮ ಬಸವಾಪಟ್ಟಣಕ್ಕೆ ತೆರಳಿ ನೆಂಟರ ಮನೆಯಲ್ಲಿ ತಂಗಿದ್ದನಂತೆ. ಅಲ್ಲಿಂದ ತಿಂಡಿ ಮುಗಿಸಿ, ರುದ್ರಪಟ್ಟಣದ ಹಾದಿ ಹಿಡಿಯುವಾಗ ಹತ್ತಿರ ಹತ್ತಿರ ಹನ್ನೊಂದಾಗಿತ್ತಂತೆ. ದಾರಿಯಲ್ಲಿ ಪುರಂದರದಾಸರ ನೀನ್ಯಾಕೊ ನಿನ್ನ ಹಂಗ್ಯಾಕೊ' ಪದವನ್ನು ಗುನುಗುತ್ತ ಬರುತ್ತಿದ್ದನಂತೆ. ಆಗ ಹೊಳೆಯ ದಡದಲ್ಲಿ ಉದ್ದಕ್ಕೂ ಹರಡಿದಂತಿದ್ದು ಕೆಲವು ಕಡೆ ದಟ್ಟವಾಗಿದ್ದ ಭಾರಿ ಮರಗಳ ಸಾಲಿನಲ್ಲಿ ಹರಿಗಲು ನಿಲ್ಲುವ ಜಾಗಕ್ಕೆ ಸುಮಾರು ದೂರದಲ್ಲಿ ಯಾರನ್ನೂ ಜೋರು ಜೋರಾಗಿ ಗದರಿಸುತ್ತಿರುವ ಗಂಡು ಧ್ವನಿಗಳನ್ನು ಕೇಳಿ, ಏನೋ ಜಗಳವಿರಬಹುದೆಂದು ಭಾವಿಸಿ ಕುತೂಹಲದಿಂದ ಆ ಕಡೆಗೆ ಹೆಜ್ಜೆಯಿಟ್ಟಂತೆ. ಶ್ಯಾಮ ಕಣ್ಣಿಗೆ ಬಿದ್ದೊಡನೆಗೆ ಆ ಇಬ್ಬರು ಹುಡುಗರು ಅಲ್ಲಿಂದ ಸರನೆ ಫೇರಿ